- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆ ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

Pratibhatane [1]

ಮಡಿಕೇರಿ : ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಯನ್ನು ವಿರೋಧಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ)ದ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಎಸ್‌ಡಿಪಿಐ ಪ್ರಮುಖರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಮಸೂದೆಯ ಪ್ರತಿಗಳನ್ನು ಹರಿದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಸಿರಿಮನೆ ನಾಗರಾಜ್, ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಯಲ್ಲಿ, ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಕುತಂತ್ರ ಅಡಗಿದೆಯೆಂದು ಗಂಭೀರ ಆರೋಪ ಮಾಡಿದರು.

ಮುಸ್ಲಿಂ ಸಮುದಾಯ ಬಾಂಧವರನ್ನು ಗುರಿಯಾಗಿರಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆಯ ಮಸೂದೆಯನ್ನು ತರಲು ಕೇಂದ್ರ ಮುಂದಾಗಿದೆ. ಆ ಮೂಲಕ ಈ ದೇಶದ ಮುಸಲ್ಮಾನರ ವಿರುದ್ಧ ಸಂಚು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಾತಿ ಧರ್ಮಗಳನ್ನು ಆಧರಿಸಿದ ಯಾವುದೇ ಮಸೂದೆ, ಕಾಯ್ದೆಗಳನ್ನು ಜಾರಿಗೆ ತಂದರೆ ಅದು ದೇಶ ದ್ರೋಹದ ಕೆಲಸವಾಗುತ್ತದೆಂದು ಎಚ್ಚರಿಸಿದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಬೂಬಕ್ಕರ್ ಮಾತನಾಡಿ, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆದು ಕೊಂಡಿರುವುದು ಸಂವಿಧಾನದ ಮೂಲ ತತ್ತ್ವಕ್ಕೆ ವಿರುದ್ಧವಾಗಿದೆ. ಇದರಿಂದ ಒಂದು ಧರ್ಮಕ್ಕೆ ಸೇರಿದವರು ಭಾರತೀಯ ಪೌರತ್ವವನ್ನು ಪಡೆಯುವಲ್ಲಿ ವಂಚಿತರಾಗುತ್ತಾರೆ. ಇಂತಹ ಪೌರತ್ವ ಮಸೂದೆಯನ್ನು ಜಾರಿಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ತೀಕ್ಷ್ಣವಾಗಿ ನುಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹ್ಸಿನ್, ಪ್ರಮುಖರಾದ ಡಿ.ಎಸ್.ನಿರ್ವಾಣಪ್ಪ, ಮೊಣ್ಣಪ್ಪ ಸೇರಿದಂತೆ ಹಲ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.