- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭೂಮಿ ಕಳೆದುಕೊಂಡರೆ ಕೊಡವರ ಅಸ್ತಿತ್ವಕ್ಕೆ ದಕ್ಕೆ : ಡಾ.ಅನಿಲ್ ಚಂಗಪ್ಪ ಆತಂಕ

Puttari [1]

ಮಡಿಕೇರಿ : ಕೊಡವರು ತಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು, ಭೂಮಿಯನ್ನು ಕಳೆದುಕೊಳ್ಳುವುದರಿಂದ ಜನಾಂಗದ ಅಸ್ತಿತ್ವವೇ ಮರೆಯಾಗುವ ಸಾಧ್ಯತೆ ಇದೆ ಎಂದು ಖ್ಯಾತ ವೈದ್ಯ ಡಾ.ಅನಿಲ್ ಚಂಗಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಕೊಡವ ಸಮಾಜದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ’ಪುತ್ತರಿ ಊರೊರ್ಮೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜ ಒಂದು ವಿಚಾರದ ಬಗ್ಗೆ ಧ್ವನಿ ಎತ್ತಿದರೆ ಅದಕ್ಕೆ ಮನ್ನಣೆ ಸಿಗುವಂತಾಗಬೇಕು ಎಂದು ಸಲಹೆ ನೀಡಿದ ಡಾ.ಅನಿಲ್ ಚಂಗಪ್ಪ, ಒಗ್ಗಟ್ಟನ್ನು ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಿದರು.

ಮಡಿಕೇರಿಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ, ಎಲ್ಲರೂ ಒಗ್ಗೂಡಿ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಅನಿವಾರ್ಯತೆ ಇದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಚೋವಂಡ ಡಿ.ಕಾಳಪ್ಪ ಮಾತನಾಡಿ, ನಮ್ಮ ಹಿರಿಯರು ಬೆಳೆಸಿದ ಸಂಸ್ಕೃತಿ, ಪರಂಪರೆ, ಪದ್ಧತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಕೊಡವರ ಈ ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕಾದ ಜವಾಬ್ದಾರಿ ಜನಾಂಗದ ಎಲ್ಲರ ಮೇಲಿದೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ತಳಿಯತಕ್ಕೆ ಬೊಳಕ್, ದುಡಿಕೊಟ್ಟ್ ಪಾಟ್, ಒಡ್ಡೋಲಗ ಸಹಿತ ನಗರದಲ್ಲಿರುವ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿಯಿರುವ ಊರು ಮಂದ್‌ಗೆ ಮೆರವಣಿಗೆಯಲ್ಲಿ ತೆರಳಲಾಯಿತು. ಕೊಡವ ಸಾಂಪ್ರಾದಯಿಕ ಸಮವಸ್ತ್ರದಲ್ಲಿ ನೂರಾರು ಕೊಡವ ಕೊಡವತಿಯರು ಕೋಲಾಟ್, ಉಮ್ಮತಾಟ್, ಬೊಳಕಾಟ್ ನೃತ್ಯ ಪ್ರಾಕಾರಗಳಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದರು.

ಕೊಡಗಿನ ಕೊಡವ ಜನಪದ ನೃತ್ಯ ಪ್ರಾಕಾರಗಳು ಪುತ್ತರಿ ಊರೊರ್ಮೆಗೆ ಮೆರುಗು ತುಂಬಿದವು. ಕೊಡವ ಸಮಾಜದ ಪದಾಧಿಕಾರಿಗಳು, ವಿವಿಧ ಕೊಡವ ಕೇರಿಗಳ ಪ್ರಮುಖರು ಹುತ್ತರಿ ಕೋಲಾಟ್ ನೃತ್ಯದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಕೊಡವ ಸಮಾಜದಲ್ಲಿ ಖ್ಯಾತ ದಂತ ವೈದ್ಯ ಡಾ.ಮೂಡೆರ ಅನಿಲ್ ಚಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡವ ಸಮಾಜದ ಗೌರವ ಕಾರ್ಯದರ್ಶಿ ಅರೆಯಡ ಪಿ.ರಮೇಶ್, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮಾದೇಟಿರ ಪಿ.ಬೆಳ್ಯಪ್ಪ ಸೇರಿದಂತೆ ಸಮಾಜದ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.