- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅತ್ಯಾಚಾರಿಗಳನ್ನು ಬಂಧಿಸದೆ ನಿರ್ಲಕ್ಷ್ಯ : ಪೊಲೀಸ್ ಠಾಣೆಯೆದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

Lacknow [1]

ಲಕ್ನೋ : ತನ್ನ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ ಎಂದು ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರ ನಿರ್ಲಕ್ಷ್ಯ ಧೋರಣೆಗೆ ಬೇಸತ್ತ ಅಪ್ರಾಪ್ತ ಯುವತಿ ತನ್ನ ತಂದೆ-ತಾಯಿಯೊಂದಿಗೆ ವಾರಾಣಸಿಯ ಪೊಲೀಸ್ ಅಧಿಕಾರಿಯಕಚೇರಿಯ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ತಕ್ಷಣ ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ವಾರಾಣಸಿಯ ಪೊಲೀಸ್ ಅಧಿಕಾರಿಯ ಆಫೀಸ್ ಎದುರು ವಿಷಯ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವತಿ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಲವು ಬಾರಿ ಪೊಲೀಸ್ ಠಾಣೆಗೆ ಅಲೆದಿದ್ದಳು. ಆದರೆ, ಪೊಲೀಸರು ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದರು.

ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಬಳಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ತನ್ನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಬರೆದಿದ್ದಾಳೆ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು ಮೂವರು ಆರೋಪಿಗಳಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪ್ರಭಾಕರ ಚೌಧರಿ, ಒಂದು ತಿಂಗಳ ಹಿಂದೆ ಈ ಬಗ್ಗೆ ಯುವತಿ ಕೇಸು ದಾಖಲಿಸಿದ್ದಳು. ಅತ್ಯಾಚಾರದ ಆರೋಪದಲ್ಲಿ ವಿಶಾಲ್ ಮತ್ತು ಜಮೀರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಉತ್ಕರ್ಷ್ ತಿವಾರಿ ಎಂಬ ಇನ್ನೋರ್ವ ನಾಪತ್ತೆಯಾಗಿದ್ದು, ಆತನನ್ನು ಸದ್ಯದಲ್ಲೇ ಬಂಧಿಸುತ್ತೇವೆ. ಬಹುಶಃ ಈ ಘಟನೆಯಿಂದ ಸಂತ್ರಸ್ತೆಯ ಕುಟುಂಬ ತೀವ್ರವಾಗಿ ನೊಂದಿರಬಹುದು. ಅವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು. ಈ ಬಗ್ಗೆ ಕೂಡ ನಾವು ತನಿಖೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಅ. 19ರಂದು ಸಂತ್ರಸ್ತ ಯುವತಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದ ಜಮೀರ್ ಮತ್ತು ಆತನ ಗೆಳೆಯ ಉತ್ಕರ್ಷ್ ಆಕೆಗೆ ಬಾಲಿವುಡ್ನಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿದ್ದರು. ಸಿನಿಮಾ ನಟಿಯಾಗುವ ಆಸೆಯಿಂದ ಅವರ ಜೊತೆ ಹೋಗಿದ್ದ ಸಂತ್ರಸ್ತೆಯ ಪ್ರಜ್ಞೆ ತಪ್ಪಿಸಿ, ರೂಮಿನಲ್ಲಿ ಅತ್ಯಾಚಾರ ನಡೆಸಿದ್ದರು. ಅವರಿಬ್ಬರ ಜೊತೆ ಸ್ನೇಹಿತ ವಿಶಾಲ್ ಕೂಡ ಸೇರಿಕೊಂಡು ಅತ್ಯಾಚಾರ ನಡೆಸಿದ್ದ.

ತಮ್ಮ ಮಗಳನ್ನು ವಿಶಾಲ್ ಮತ್ತು ಉತ್ಕರ್ಷ್ ಅಪಹರಿಸಿದ್ದಾರೆ ಎಂದು ಯುವತಿಯ ತಂದೆ ದೂರು ನೀಡಿದ್ದರು. ಆಕೆಯನ್ನು ಹುಡುಕಲು ಪೊಲೀಸರು ಪ್ರಯತ್ನ ಪಟ್ಟರೂ ಆಕೆ ಸಿಕ್ಕಿರಲಿಲ್ಲ. ಕೊನೆಗೆ ಕೆಲವು ದಿನಗಳ ನಂತರ ಮುಂಬೈ ಹೋಟೆಲ್ನಿಂದ ತಪ್ಪಿಸಿಕೊಂಡ ಯುವತಿ ತನ್ನ ಮನೆ ಸೇರಿಕೊಂಡಿದ್ದಳು. ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಮನೆಯವರಿಗೆ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮೂವರ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸು ದಾಖಲಾಗಿತ್ತು.