- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೃಷಿಭೂಮಿ ಉಳಿದರೆ ಸಂಸ್ಕೃತಿ ಉಳಿಯುತ್ತದೆ : ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯ

Ponnampete [1]

ಮಡಿಕೇರಿ : ಕೃಷಿ ಸಂಸ್ಕೃತಿ ಹೊಂದಿರುವ ಕೊಡವರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದ್ದಾರೆ.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲಿ ಆಯೋಜಿಸಿದ್ದ ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿಕೋಲ್ ಮಂದ್ ನಮ್ಮೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೃಷಿ ಹಾಗೂ ಈ ಭೂಮಿಯೊಂದಿಗೆ ಕೊಡವರ ಅವಿನಾಭಾವ ಸಂಬಂಧವಿದೆ. ಕೊಡವರ ಬದುಕಿನಲ್ಲಿ ಆಚಾರ-ವಿಚಾರ, ಪದ್ಧತಿ-ಪರಂಪರೆಯನ್ನು ಶೃದ್ಧೆಯಿಂದ ಆಚರಿಸಿಕೊಂಡು ಬಂದಾಗ ಕೊಡವ ಸಂಸ್ಕೃತಿ ಸ್ವಾಭಾವಿಕವಾಗಿ ಬೆಳವಣಗೆ ಕಾಣಲಿದೆ. ಕೊಡವ ಸಾಂಸ್ಕೃತಿಕ-ಜಾನಪದ ಕಲೆ ಪ್ರದರ್ಶನಕ್ಕೆ ಸೀಮಿತವಾಗಬಾರದು. ಅದು ಆಚರಣೆಯಲ್ಲಿ ಬಂದಾಗ ಹಿರಿಯರಿಂದ ಕಿರಿಯರಿಗೆ ಹಸ್ತಾಂತರವಾಗುತ್ತದೆ ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲೆಯ ಪ್ರದರ್ಶನವಷ್ಟೇ ಕೊಡವ ಸಂಸ್ಕೃತಿಯಲ್ಲ. ಹುಟ್ಟಿನಿಂದ ಸಾಯುವವರೆಗೆ ಕೊಡವ ಸಂಸ್ಕೃತಿಯ ಆಚರಣೆಗೆ ಒತ್ತು ನೀಡಬೇಕು. ಕೊಡವರು ಮದುವೆಗಳನ್ನು ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಸಾವಿನ ಅಂತ್ಯಕ್ರಿಯೆ ಸಹ ಯಾರಿಗೋ ವಹಿಸುವಂತಾದರೆ ಕೊಡವ ಆಚಾರ-ವಿಚಾರ ಹೇಗೆ ಉಳಿಯುತ್ತದೆ ಎಂದು ಅವರು ಪ್ರಶ್ನಿಸಿದರು.

Ponnampete [2]

ಕೊಡಗಿನಲ್ಲಿ ಕೃಷಿ ಬದುಕು ಉಳಿಸಿಕೊಳ್ಳಲು ಕಾಫಿ, ಕಾಳುಮೆಣಸು, ಭತ್ತ ಕೃಷಿಯ ಸಮಸ್ಯೆ, ಕಾಡಾನೆ, ಹುಲಿ ಹಾವಳಿ ಬಗ್ಗೆ ಒಂದಾಗಿ ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಇಲ್ಲಿನ ಮೂಲ ನಿವಾಸಿಗಳಿಗೆ ಕೊಡಗಿನಲ್ಲಿ ನೆಲೆ ಕಳೆದುಕೊಳ್ಳಲಿದ್ದಾರೆ ಎಂದು ಬಾಂಡ್ ಗಣಪತಿ ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‌ಮಾಡ ರಾಜೀವ್‌ಬೋಪಯ್ಯ ಅವರು ವಿವಿಧ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೊಡವರು ತಮ್ಮ ಸ್ವಹಿತಸಕ್ತಿಗಾಗಿ ರಾಜಕೀಯ ಪಕ್ಷಗಳಿಗೆ, ಮುಖಂಡರುಗಳಿಗೆ ಮುಜುಗರವಾಗುತ್ತದೆ ಎಂದು ಜನಾಂಗದ ಹಿತಾಸಕ್ತಿಯನ್ನು ಬಲಿಕೊಡದೆ, ಅನ್ಯಾಯವನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಪ್ರಬಲ ಜಾತಿ ರಾಜಕಾರಣದ ನಡುವೆ ಅಲ್ಪಸಂಖ್ಯಾತ ಕೊಡವರಿಗೆ ಧ್ವನಿಗೆ ಸರಕಾರದಲ್ಲಿ ಬೆಲೆ ಇಲ್ಲದಾಗಿದೆ. ಕೊಡವರ ಹಕ್ಕುಗಳ ಬಗ್ಗೆ ರಾಜ್ಯ ಸಭಾ ಸದಸ್ಯರುಗಳಾದ ಡಾ.ಸುಬ್ರಮಣ್ಯನ್‌ಸ್ವಾಮಿ, ಹರಿಪ್ರಸಾದ್, ಕುಪೇಂದ್ರರೆಡ್ಡಿಯವರು ಸಂಸತ್‌ನಲ್ಲಿ ಧ್ವನಿ ಎತ್ತಿದ್ದಾರೆ. ಅವರು ಓಟ್ ಬ್ಯಾಂಕ್‌ಗಾಗಿ ಕೊಡವರ ಪರಧ್ವನಿ ಎತ್ತಲಿಲ್ಲ. ಬದಲಿಗೆ ಪ್ರಜಾಪ್ರಭುತ್ವದಲ್ಲಿ ಒಂದು ಅತೀ ಸೂಕ್ಷ್ಮ ಜನಾಂಗವನ್ನು ರಕ್ಷಿಸುವ ಹೊಣೆ ಮತ್ತು ಸಾಂವಿಧಾನಿಕ ಹಕ್ಕಿನ ಬಗ್ಗೆ ಪ್ರತಿಪಾದಿಸಿದ್ದಾರೆ ಎಂದರು.

ಕೊಡವರ ಸಾಂಪ್ರದಾಯಿಕ ಉಡುಪಿನೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ನಮ್ಮ ಸಂಸದ ಪ್ರತಾಪ್‌ಸಿಂಹ ಅವರು ಮೌನವಹಿಸದೇ, ಕೊಡವ ಜನಾಂಗದ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸರಕಾರದ ಗಮನ ಸೆಳೆಯುವ ಮೂಲಕ ಜನಾಂಗವನ್ನು ರಕ್ಷಣೆ ಮಾಡಲು ಮುಂದಾಗಬೇಕೆಂದು ರಾಜೀವ್ ಬೋಪಯ್ಯ ಹೇಳಿದರು.

Ponnampete [3]

ಕೊಡಗಿನಲ್ಲಿ ರಸ್ತೆ, ನೀರು, ಚರಂಡಿಗಳ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಕೊಡವರ ನೈಜ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಮರೆಮಾಚುತ್ತಿದ್ದಾರೆ. ಕೊಡಗಿನ ಜನರ ಆರ್ಥಿಕ ಜೀವಾಳವಾದ ಕಾಫಿ, ಕಾಳುಮೆಣಸು, ಭತ್ತದ ಕೃಷಿಗೆ ಉತ್ತೇಜನ ಮತ್ತು ಉತ್ತಮ ಮಾರುಕಟ್ಟೆ ಒದಗಿಸುವ ಜನರ ಕೂಗಿಗೆ ಜನಪ್ರತಿನಿಧಿಗಳಿಂದ ಸೂಕ್ತ ಸ್ಪಂದನೆ ಲಭಿಸದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭ ಸಾಂಪ್ರದಾಯಿಕ ಪುತ್ತರಿ ಕೋಲ್ ಮಂದ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಾಂಪ್ರದಾಯಿಕವಾಗಿ ಮಂದ್ ಮರಿವೊ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ನೆಲ್ಲಮಾಡ ಸೌಮ್ಯ ತಂಡದಿಂದ ಸ್ವಾಗತ ನೃತ್ಯ, ಇಟ್ಟೀರ ನಿಖಿಲ್‌ನಾಚಪ್ಪ ಅವರಿಂದ ಹಾಡು ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ, ಪೊನ್ನಂಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಜಂಟಿ ಕಾರ್ಯದರ್ಶಿ ಅಪ್ಪಂಡೇರಂಡ ಶಾರದಾ, ಖಜಾಂಚಿ ಮೂಕಳೇರ ಲಕ್ಷ್ಮಣ, ಖಾಯಂ ಆಹ್ವಾನಿತ ನಿರ್ದೇಶಕ ಚೆಪ್ಪುಡೀರ ಕಿಟ್ಟುಅಯ್ಯಪ್ಪ, ನಿರ್ದೆಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಮೂಕಳಮಾಡ ಅರಸುನಂಜಪ್ಪ, ಅಡ್ಡಂಡ ಸುನಿಲ್‌ಸೋಮಯ್ಯ, ಮಂಡಚಂಡ ದಿನೇಶ್‌ಚಿಟ್ಟಿಯಪ್ಪ, ಚೆಪ್ಪುಡೀರ ರಾಕೇಶ್‌ದೇವಯ್ಯ, ಚೊಟ್ಟೆಕಾಳಪಂಡ ಆಶಾಪ್ರಕಾಶ್, ಚೆಪ್ಪುಡೀರ ರೂಪಉತ್ತಪ್ಪ ಹಾಜರಿದ್ದರು. ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಕಾಳಿಮಾಡ ಮೋಟಯ್ಯ ಮತ್ತು ಸಮಾಜದ ವ್ಯವಸ್ಥಾಪಕರಾದ ಬಯವಂಡ ರಮೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.