- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಬ್ಬಗಳಲ್ಲಿ ಪಾಲ್ಗೊಂಡು ಸಂಸ್ಕೃತಿಯನ್ನು ಜೀವಂತವಾಗಿಸಿ : ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಪೂಣಚ್ಚ ಕರೆ

Bengaluru [1]

ಮಡಿಕೇರಿ : ಕೊಡವರು ಬೆಂಗಳೂರಿನಂತಹ ದೂರದ ಪ್ರದೇಶಗಳಲ್ಲಿದ್ದರೂ ಕೂಡ, ತಮ್ಮ ವಿಶಿಷ್ಟ ಸಂಸ್ಕೃತಿಯ ಹಬ್ಬ ಹರಿದಿನಗಳ ಸಂದರ್ಭ ಕೊಡಗಿನ ತಮ್ಮ ಊರಿಗೆ ತಪ್ಪದೆ ಹಾಜರಾಗುವ ಮೂಲಕ ನಮ್ಮ ಆಚಾರ, ವಿಚಾರ, ಸಂಸ್ಕೃತಿಯ ಬೆಳವಣಿಗೆಗೆ ಕಾರಣರಾಗಬೆಕೆಂದು ಬೆಂಗಳೂರು ಕ್‌ಗ್ಗಟ್ಟ್ ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಚಂಡ ಪೂಣಚ್ಚ ಕರೆ ನೀಡಿದ್ದಾರೆ.

ಬೆಂಗಳೂರು ಕ್‌ಗ್ಗಟ್ಟ್ ನಾಡ್ ಕೊಡವ ಸಂಘದ ಸ್ಥಾಪಕ ಸದಸ್ಯರ ಒತ್ತೊರ್ಮೆ ಕೂಟ ಮಂಡಚಂಡ ಸುರೇಶ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಕೊಡವ ಸಮಾಜದ ಅಪ್ಪಚ್ಚಕವಿ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ ಪಾಲ್ಗೊಂಡು ಪೂಣಚ್ಚ ಅವರು ಮಾತನಾಡಿ, ಕ್‌ಗ್ಗಟ್ಟ್‌ನಾಡಿಗೆ ಸೇರಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘ ಸಹಾಯ ಮಾಡುತ್ತದೆಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಚೊಟ್ಟೆಂಗಡ ಲೋಕೇಶ್ ಗಣಪತಿ, ಮುಂದಿನ ದಿನಗಳಲ್ಲಿ ಕೊಡವ ವಿದ್ಯಾರ್ಥಿಗಳಿಗೆ ಕೆಎಎಸ್, ಐಎಎಸ್ ಪರೀಕ್ಷೆಗಳಿಗೆ ಪೂರಕವಾದ ಕೋಚಿಂಗ್ ಕ್ಲಾಸ್ ನಡೆಸುವ ಉದ್ದೇಶವಿದೆ. ಹಾಗೆಯೇ ಕೊಡಗಿನಿಂದ ಉದ್ಯೋಗ ಹುಡುಕಿಕೊಂಡು ಬರುವ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ಒಂದು ಕೇಂದ್ರ ತೆರೆಯುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಫೆಡರೇಷನ್ ಆಫ್ ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ ಪಾಲ್ಗೊಂಡಿದ್ದರು. ಸಂಘದ ಖಜಾಂಚಿ ಮಾಚಿಮಾಡ ಕುಶಾಲಪ್ಪ, ದಾದಾ ಬೆಳ್ಯಪ್ಪ, ಚೆಪ್ಪುಡಿರ ತಿಲಕ್ ಮಾತನಾಡಿದರು.

ಸಭಾ ಕಾರ್ಯಕ್ರಮದ ಖ್ಯಾತ ಗಾಯಕರಾದ ಚೆಕ್ಕೇರ ಪಂಚಮ್, ಬೊಪ್ಪಂಡ ಜಫ್ರೀ ಹಾಗೂ ಮಾಳೇಟಿರ ಅಜಿತ್ ಹಾಡುಗಾರಿಕೆ ಮೂಲಕ ನೆರೆದಿದ್ದವರನ್ನು ರಂಜಿಸಿದರು. ನೆಲ್ಲಿರ ಸುರೇಶ್ ಹಾಗೂ ಬೊಳ್ಳಜಿರ ಕಿರಣ್ ತಂಡ ಪೊಲೀಸ್ ಸ್ಟೇಷನ್ ನಾಟಕ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೊಡವ ಸಮಾಜದ ಉಪಾಧ್ಯಕ್ಷೆ ಮೀರಾ ಜಲಜ್‌ಕುಮಾರ್, ಗೌರವ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಕೋಟ್ರಮಾಡ ಯಶಿಕಾ ಬಿಪಿನ್ ಪ್ರಾರ್ಥಿಸಿದರು.