- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ : ಸ್ಟೀವ್ ಸ್ಮಿತ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ವಿರಾಟ್ ಕೊಹ್ಲಿ

Virat [1]

ದುಬೈ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬುಧವಾರ ನೂತನ ಟೆಸ್ಟ್‌ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್ ಅವರನ್ನು ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ.

ರ‍್ಯಾಂಕಿಂಗ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಗಿಂತ ಕೇವಲ 3 ಪಾಯಿಂಟ್ ಹಿಂದಿದ್ದರು.

ಇತ್ತೀಚಿಗೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್‌ನಲ್ಲಿ 136 ರನ್ ಬಾರಿಸುವ ಮೂಲಕ ಒಟ್ಟು 928 ಅಂಕಗಳನ್ನು ಗಳಿಸಿದ್ದಾರೆ.

ಇನ್ನು ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಕೇವಲ 36 ರನ್ ಗಳಿಸುವ ಮೂಲಕ 931 ರಿಂದ 923 ಅಂಕಗಳಿಗೆ ಕುಸಿದಿದ್ದಾರೆ. ಹೀಗಾಗಿ ಸ್ಮಿತ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಕೊಹ್ಲಿಗೆ ನ್ಯೂಜಿಲೆಂಡ್ ವಿರುದ್ಧ ಇನ್ನೂ ಎರಡು ಟೆಸ್ಟ್ ಪಂದ್ಯಗಳಿವೆ. ಹೀಗಾಗಿ ಕೊಹ್ಲಿ ಈ ವರ್ಷವನ್ನು ನಂ.1 ಸ್ಥಾನದಲ್ಲೇ ಕೊನೆಗೊಳಿಸಲಿದ್ದಾರೆ.

ಮೂರನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ನಾಯಕ ಕೇನ್ ವಿಲಿಯಮ್ಸನ್ 877 ಅಂಕ ಸಂಪಾದಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಚೇತೇಶ್ವರ ಪೂಜಾರ (791), ಐದನೇ ಸ್ಥಾನದಲ್ಲಿ ಡೇವಿಡ್ ವಾರ್ನರ್ (764) ಮತ್ತು ಅಂಜಿಕ್ಯಾ ರಹಾನೆ(759) ಆರನೇ ಸ್ಥಾನದಲ್ಲಿದ್ದಾರೆ.

ತಂಡ ರ‍್ಯಾಂಕಿಂಗ್ ಪಟ್ಟಿಯಲ್ಲೂ ಭಾರತ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಟಾಪ್ 5 ಸ್ಥಾನ ಪಡೆದಿವೆ.

ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ (900) ಅಗ್ರ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡ (839), ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ (830), ನ್ಯೂಜಿಲೆಂಡ್‌ನ ನೇಲ್ ವ್ಯಾಗ್ನರ್ (814), ಭಾರತದ ಜಸ್‌ಪ್ರೀತ್ ಬೂಮ್ರಾ (794) ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದಾರೆ.