- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ : ಶಿವಮೊಗ್ಗ ರೈಲ್ವೆ ನಿಲ್ಧಾಣದಲ್ಲಿ 15 ರೈತರು ಪೊಲೀಸ್ ವಶಕ್ಕೆ

shivamogga [1]

ಶಿವಮೊಗ್ಗ : ತುಮಕೂರಿನಲ್ಲಿ ಇಂದು ನಡೆಯಲಿರುವ ಬೃಹತ್ ರೈತ ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲು ಹೊರಟಿದ್ದ 15 ರೈತರನ್ನು ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.

ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ಬೃಹತ್ ರೈತ ಸಮಾವೇಶ ನಡೆಯಲಿದ್ದು, 1 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಂದು ವೇದಿಕೆಯಲ್ಲಿ ಪ್ರಧಾನಿ ಮೋದಿ ಬಟನ್ ಒತ್ತುವುದರ ಮೂಲಕ 6 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಹಣವನ್ನು ವರ್ಗಾವಣೆ ಮಾಡಲಿದ್ದಾರೆ. ಆ ಎಲ್ಲ ರೈತ ಕುಟುಂಬಗಳಿಗೆ ಏಕಕಾಲಕ್ಕೆ ವರ್ಗಾವಣೆಯಾಗಲಿದೆ.

ಅಲ್ಲದೆ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ 32 ರೈತರಿಗೆ ” ಪಿಎಂ ಕಿಸಾನ್” ಪ್ರಶಸ್ತಿಯನ್ನೂ ಮೋದಿ ವಿತರಿಸಲಿದ್ದಾರೆ. ಕೇಂದ್ರ ಕೃಷಿ ಸಚಿವ (ರಾಜ್ಯ) ನರೇಂದ್ರ ಸಿಂಗ್ ತೋಮರ್, ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷಣ ಸವದಿ, ಜೆ.ಸಿ. ಮಾಧುಸ್ವಾಮಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದ ಶಿವಮೊಗ್ಗ ಜಿಲ್ಲಾ ರೈತ ಸಂಘದ ಸದಸ್ಯರು ಇಂದು ತುಮಕೂರಿಗೆ ತೆರಳುತ್ತಿದ್ದರು.

ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರಿಂದ 15 ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿಲ್ಲಾ ಕಾರ್ಯದರ್ಶಿ ಪಿ.ಡಿ. ಮಂಜಪ್ಪ, ಸೇರಿದಂತೆ 15 ಜನ ರೈತರನ್ನು ವಶಕ್ಕೆ ಪಡೆಯಲಾಗಿದೆ.