- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಂತಾರಾಷ್ಟ್ರೀಯ ಹಾಕಿಗೆ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರ ವಿದಾಯ

sunitha [1]

ನವದೆಹಲಿ : ಭಾರತೀಯ ವನಿತಾ ತಂಡದ ಖ್ಯಾತ ಡಿಫೆಂಡರ್‌ ಸುನೀತಾ ಲಾಕ್ರಾ ಅಂತಾರಾಷ್ಟ್ರೀಯ ಹಾಕಿಗೆ ಗುರುವಾರ ವಿದಾಯ ಘೋಷಿಸಿದರು. ಸತತವಾಗಿ ಕಾಡುತ್ತಿರುವ ಮಂಡಿನೋವಿನಿಂದಾಗಿ ತಾನು ಈ ಕಠಿನ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು ಎಂದರು. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್‌ ಕನಸು ಛಿದ್ರಗೊಂಡಿದೆ.

“ಇಂದು ನನ್ನ ಬದುಕಿನ ಅತ್ಯಂತ ದುಃಖದ ದಿನ. ನಾನು ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದರು. ಸುನೀತಾ ಲಾಕ್ರಾ 2008ರಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರವೇಶಿಸಿದ್ದರು. 2018ರ ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ಯಲ್ಲಿ ನಾಯಕಿಯಾಗಿದ್ದರು. ಇದರಲ್ಲಿ ದ್ವಿತೀಯ ಸ್ಥಾನಿಯಾದ ಭಾರತ ಬೆಳ್ಳಿ ಪದಕ ಜಯಿಸಿತ್ತು. 2014ರ ಏಶ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲೂ ಸುನೀತಾ ಆಡಿದ್ದರು.

“2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವಂತಾದದ್ದು ನನ್ನ ಪಾಲಿನ ಅದೃಷ್ಟವೇ ಸರಿ. 3 ದಶಕಗಳ ಬಳಿಕ ಭಾರತದ ವನಿತಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಸಂಪಾದಿಸಿತ್ತು. ಈ ವರ್ಷ ಟೋಕಿಯೊ ಒಲಿಂಪಿಕ್ಸ್‌ ನಡೆಯಲಿದೆ. ನಮ್ಮ ತಂಡ ಭರದ ಸಿದ್ಧತೆಯಲ್ಲಿದೆ. ಆದರೆ ನನಗೆ ಅದೃಷ್ಟ ಇಲ್ಲ. ಸದ್ಯದಲ್ಲೇ ಮತ್ತೂಂದು ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಯಾವಾಗ ಚೇತರಿಸಿಕೊಳ್ಳುತ್ತೇನೋ ನನಗೇ ಗೊತ್ತಿಲ್ಲ. ಟೋಕಿಯೊದಲ್ಲಿ ಆಡಲಿರುವ ಭಾರತ ತಂಡಕ್ಕೆ ನನ್ನ ಶುಭಾಶಯಗಳು’ ಎಂದು 139 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸುನೀತಾ ಲಾಕ್ರಾ ಹೇಳಿದರು.

“ನಾನು ಭಾರತೀಯ ಹಾಕಿಯೊಂದಿಗೆ ಕಳೆದ ದಿನಗಳು ನಿಜಕ್ಕೂ ಸ್ಮರಣೀಯ. ನಾವೆಲ್ಲ ಒಂದು ಕುಟುಂಬದಂತಿದ್ದೆವು. ಹಾಕಿ ಇಂಡಿಯಾಕ್ಕೆ, ಪ್ರಧಾನ ಕೋಚ್‌ ಸೋರ್ಡ್‌ ಮರಿನ್‌ ಅವರಿಗೆ ಕೃತಜ್ಞಳಾಗಿದ್ದೇನೆ. ನನ್ನ ಕುಟುಂಬ, ಸ್ನೇಹಿತರು, ಒಡಿಶಾದ ಅಪಾರ ಅಭಿಮಾನಿಗಳೆಲ್ಲರಿಗೂ ಧನ್ಯವಾದಗಳು. ಇವರ ಬೆಂಬಲ ವಿಲ್ಲದೆ ನಾನು ಇಲ್ಲಿಯ ತನಕ ಬರಲಾಗುತ್ತಿರಲಿಲ್ಲ…’ ಎಂದು ಸುನೀತಾ ವಿದಾಯದ ಸಂದರ್ಭದಲ್ಲಿ ಹೃದಯಪೂರ್ವಕವಾಗಿ ನುಡಿದರು.