ಮಂಗಳೂರು: ಕರಾವಳಿ ಕರ್ನಾಟಕ ಜನಾಭಿವೃದ್ದಿ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ಇಂದು ನೀರಿನ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವು ನಡೆಯಿತು. ಹಿರಿಯ ಮುಂದಾಳು ಸೆಲೀನಾ ರಾಣಾರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಸಂಚಾಲಕಾರಾದ ವಿದ್ಯಾದಿನಕರ್ ರವರು ನೇತ್ರಾವತಿ ನದಿಯು ಮಂಗಳೂರು ನಗರಕ್ಕೆ ಪ್ರಮುಖ ನೀರಿನ ಮೂಲವಾಗಿದ್ದು ತುಂಬೆ ಅಣೆಕಟ್ಟಿನ ಮೂಲಕ ನಗರಕ್ಕೆ ಹಾಗೂ ಕೈಗಾರಿಕೆಗಳಿಗೆ ನೀರಿನ ಪೂರೈಕೆಯಾಗುತಿದೆ. ಆದರೆ ಬೇಸಿಗೆಯಲ್ಲಿ ನೀರಿನ ಅಭಾವ ಕಂಡುಬರುವುದರಿಂದ ತುಂಬೆ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಅಗತ್ಯವಿದೆ ಎಂದವರು ಹೇಳಿದರು.
ಆದರೆ ಈಗಾಗಲೇ ನೇತ್ರಾವತಿ ನದಿಗೆ ಶಂಬೂರು ಮತ್ತು ಸರಪಾಡಿಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಎಂ.ಆರ್.ಪಿ.ಎಲ್ ಹಾಗು ಮಂಗಳೂರು ವಿಶೇಷ ಅರ್ಥಿಕ ವಲಯಕ್ಕೆ ನೀರನ್ನು ಪೂರೈಸಲಾಗುತ್ತಿದೆ. ನೀರಿನ ಸೋರಿಕೆ, ಅಕ್ರಮ ಬಳಕೆ, ನೀರಿನ ಖಾಸಗೀಕರಣದ ಸಂಚು ಮೊದಲಾದ ಕಾರಣಗಳಿಂದ ನಗರದ ಜನರಿಗೆ ಸಿಗಬೇಕಾದಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಹೀಗಾದರೆ ಮುಂದೊಂದು ದಿನ ಮಂಗಳೂರಿಗೆ ತೀವ್ರತರವಾದ ನೀರಿನ ಅಭಾವ ಎದುರಾಗಲಿದ್ದು, ಇದರ ವಿರುದ್ದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅದಕ್ಕಾಗಿ ಈ ಅಭಿಯಾನ ಎಂದರು
ಕರ್ನಾಟಕ ರಕ್ಷಣಾ ವೇದಿಕೆಯ ಡಾ.ಅಣ್ಣಯ್ಯ ಕುಲಾಲ್, ಹೇಮಲತಾ ಭಟ್, ದಿನೇಶ್ ಶೆಟ್ಟಿ ಕೂಳೂರು, ಅಶೋಕ್ ಭಟ್ ಇನ್ನಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English