- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರು : ಊಟದಲ್ಲಿ ಹುಳುಗಳು ಪತ್ತೆ; ಊಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥ

mysuru [1]

ಮೈಸೂರು : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿನ ಆದರ್ಶ ಶಾಲೆಯಲ್ಲಿ ಸೋಮವಾರ ಮದ್ಯಾಹ್ನ ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು, ಊಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಅಸ್ವಸ್ಥರಾದ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 6ನೇ ತರಗತಿ ವಿದ್ಯಾರ್ಥಿಗಳು ಮಾತ್ರ ಊಟ ಸೇವಿಸಿದ್ದರು. ಊಟದಲ್ಲಿ ಹುಳು ಕಂಡೊಡನೆ ವಿದ್ಯಾರ್ಥಿಗಳು ವಾಂತಿ ಮಾಡಿಕೊಂಡಿದ್ದಾರೆ. ಕೂಡಲೆ ಎಚ್ಚೆತ್ತು ಶಾಲಾ ಸಿಬ್ಬಂದಿಗಳು ಇತರ ವಿದ್ಯಾರ್ಥಿಗಳ ಊಟ ಸ್ಥಗಿತಗೊಳಿಸಿದರು.

ಸುಜಾತಾ ಮತ್ತು ಅಬ್ರಹಂ ಎಂಬ ವಿದ್ಯಾರ್ಥಿನಿಯರು ತೀವ್ರವಾಗಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಉಳಿದ ಮಕ್ಕಳಿಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮನೆಗೆ ಕಳುಹಿಸಲಾಯಿತು. ವಿಚಾರ ತಿಳಿಯುತ್ತಿದ್ದಂತೆ ಪಾಲಕರು ಆಸ್ಪತ್ರೆಗೆ ಬಂದು ಮಕ್ಕಳ ಸ್ಥಿತಿಗತಿ ನೋಡಿ ಶಾಲೆಯ ಆಡಳಿತ ಮಂಡಳಿ ಮತ್ತು ಅಕ್ಷರ ದಾಸೋಹ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಗೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಭಾಸ್ಕರ್, ಡಾ.ರವಿಕುಮಾರ್ ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಅಡುಗೆ ಪದಾರ್ಥ ಪರಿಶೀಲಿಸಿದರು. ಅಡುಗೆ ಬೇಳೆ ಹಾಳಾಗಿದ್ದು, ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದರು.

ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಕರ್ತವ್ಯ ಲೋಪವೆಸಗಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸ್ಥಳದಲ್ಲಿದ್ದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು ಮತ್ತು ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.