ಬೆಳ್ತಂಗಡಿ : ಆನೆ ದಂತ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ದಂತಚೋರರಿಂದ 30 ಲಕ್ಷ ರೂ. ಮೌಲ್ಯದ ಎರಡು ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿಯ ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ಪಿ.ಕೆ.ದಿನೇಶ (33), ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮ ಕುಂಬರಡಿ ನಿವಾಸಿ ವಿ.ಕುಮಾರ (37) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂಧಿಗಳು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪುದುವೆಟ್ಟು ಎಂಬಲ್ಲಿ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಿ ಎರಡು ಆನೆ ದಂತ, ಓಮ್ನಿ ಕಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಲಕ್ಕೆ ಹಾಜರುಪಡಿಸಲಾಗಿದೆ.
ಪುತ್ತೂರು ಅರಣ್ಯ ಸಂಚಾರಿ ದಳದ ಸಿಬಂದಿ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ, ರಾಧಕೃಷ್ಣಾ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪುದುವೆಟ್ಟು, ನೆರಿಯಾ, ದಿಡುಪೆ, ಚಾರ್ಮಾಡಿ ಪರಿಸರದಲ್ಲಿ ಆನೆಗಳ ಓಡಾಟ ಹೆಚ್ಚಿರುವ ನಡುವೆಯೇ ಆನೆದಂತ ಚೋರರ ಸೆರೆಯಾಗಿರುವುದಿರಿಂದ ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಉಜಿರೆ ಸುರ್ಯ ಸಮೀಪ ಮನೆಯೊಂದರ ಶೆಡ್ ನಲ್ಲಿ ಇರಿಸಲಾಗಿದ್ದ 51.730 ಕೆ.ಜಿ. ತೂಕದ 10 ಆನೆ ದಂತವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದರು. ಇದೀಗ ಮತ್ತೊಂದು ಪ್ರಕರಣ ದಾಖಲಾಗುತ್ತಲೇ ಆನೆದಂತ ಚೋರರ ಜಾಲ ಎಲ್ಲೆಡೆ ವಿಸ್ತರಿಸಿರುವುದರ ಬಗ್ಗೆ ಇಲಾಖೆ ಮತ್ತಷ್ಟು ತನಿಖೆ ನಡೆಸುತ್ತಿದೆ.
Click this button or press Ctrl+G to toggle between Kannada and English