- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ : ಸಿಎಎ ಮೇಲ್ಮನವಿ ಬಗ್ಗೆ ಸುಪ್ರೀಂಕೋರ್ಟ್

SC [1]

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಸಿಂಧುತ್ವ ಪ್ರಶ್ನಿಸಿ ಹಾಗೂ ಸಿಎಎ ಸಂವಿಧಾನಬದ್ಧ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹಿಂಸಾಚಾರ ನಿಂತ ಬಳಿಕವೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಗುರುವಾರ ತಿಳಿಸಿದೆ.

ದೇಶ ಪ್ರಸ್ತುತ ಸಂದಿಗ್ಧ ಕಾಲಘಟ್ಟದಲ್ಲಿದೆ. ಇಂತಹ ಮೇಲ್ಮನವಿಗಳಿಂದ ಸಹಾಯವಾಗಲ್ಲ. ಹೀಗಾಗಿ ಹಿಂಸಾಚಾರ ನಿಂತ ನಂತರವೇ ಸಿಎಎ ಕುರಿತ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬದ್ಧ ಎಂದು ಘೋಷಿಸಬೇಕು. ಅಲ್ಲದೇ ಕಾನೂನಿನ ಕುರಿತು ಪ್ರತಿಭಟನೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ವಿನೀತ್ ಧಾಂಡಾ ಮೇಲ್ಮನವಿ ಸಲ್ಲಿಸಿದ್ದರು.

ಕಾಯ್ದೆಯನ್ನು ಅಂಗೀಕರಿಸಿದ ಸಂಸತ್ ಅನ್ನು ಸಂವಿಧಾನಬದ್ಧ ಎಂದು ನಾವು ಹೇಗೆ ಘೋಷಿಸಲು ಸಾಧ್ಯ? ಸಂವಿಧಾನದ ಬಗ್ಗೆ ಈಗಾಗಲೇ ಪೂರ್ವಭಾವನೆಗಳನ್ನು ಹೊಂದಲಾಗಿದೆ. ಒಂದು ವೇಳೆ ನೀವು ಕಾನೂನು ವಿದ್ಯಾರ್ಥಿಯಾಗಿದ್ದರೆ ನಿಮಗದು ತಿಳಿಯಲಿದೆ ಎಂದು ಸಿಜೆಐ ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಕಾನೂನಿನ ಸಿಂಧುತ್ವ ನಿರ್ಧರಿಸುವುದು ಕೋರ್ಟ್ ಕೆಲಸವಾಗಿದೆ. ಇದು ಸಂವಿಧಾನಬದ್ಧ ಎಂದು ಘೋಷಿಸುವುದು ಅಲ್ಲ ಎಂದು ಸಿಜೆಐ ಬೋಬ್ಡೆ, ಜಸ್ಟೀಸ್ ಬಿಆರ್ ಗವಿ ಮತ್ತು ಜಸ್ಟೀಸ್ ಸೂರ್ಯಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತಿಳಿಸಿದೆ.