ಬೆಂಗಳೂರು : ಹಿರಿಯ ಸಾಹಿತಿ, ಲೇಖಕ ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಇಂದು ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮೂರ್ತಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ನ್ಯುಮೋನಿಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದೆ ಶನಿವಾರ ಮುಂಜಾನೆ ಅಸ್ತಂಗತರಾಗಿದ್ದಾರೆ.
ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 9ಗಂಟೆ ನಂತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿದಾನಂದಮೂರ್ತಿಯವರ ಆಸೆಯಂತೆ ಅವರ ದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಚಿದಾನಂದಮೂರ್ತಿ ಅವರು ಕನ್ನಡ ಭಾಷಾಶಾಸ್ತ್ರ, ವಚನ ಸಾಹಿತ್ಯ ಸಂಶೋಧನೆ ಮತ್ತು ಶಾಸನ ಶಾಸ್ತ್ರದಲ್ಲಿ ಅಮೋಘ ಕೊಡುಗೆ ನೀಡಿದ್ದು ವಿಜಯನಗರ ಸಾಮ್ರಾಜ್ಯ, ಹಂಪಿ ಪರಿಸರದ ಕುರಿತೂ ಸಂಶೋಧನೆಗಳನ್ನು ಮಾಡಿದ್ದಾರೆ.
ಚಿದಾನಂದಮೂರ್ತಿ ಅವರಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು,ಗೌರವಗಳು ದೊರೆತಿವೆ. ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಪ್ರತಿವರ್ಷ ಚಿದಾನಂದಮೂರ್ತಿ ಅವರ ಜನ್ಮದಿನವಾದ ಮೇ ಹತ್ತರಂದು “ಚಿದಾನಂದ ಪ್ರಶಸ್ತಿ” ನೀಡಲಾಗುತ್ತಿದೆ.
ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ, ಸಚಿವ ಎಸ್. ಸುರೇಶ್ ಕುಮಾರ್ ಸಂತಾಪ ಸೂಚಿಸಿದ್ದು “ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪಿಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಎಂ. ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ” ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇಂದು ಬೆಳಗ್ಗೆ ಸಚಿವ ವಿ.ಸೋಮಣ್ಣಅವರು ನಿವಾಸಕ್ಕೆ ತೆರಳಿ ಹಿರಿಯ ಸಾಹಿತಿಯ ಅಂತಿಮ ದರ್ಶನ ಪಡೆದಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಪ್ರಮುಖ ಕಾರಣರಾಗಿದ್ದ ಚಿದಾನಂದ ಮೂರ್ತಿಯವರು ಇತಿಹಾಸಕಾರರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ನಿವಾಸಕ್ಕೆ ತರಲಾಗುವುದು. ಹಿರಿಯ ಸಾಹಿತಿ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
Click this button or press Ctrl+G to toggle between Kannada and English