- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜಿಲ್ಲಾ ಕಾಂಗ್ರೆಸ್ ನಿಲುವಿಗೆ ಜೆಡಿಎಸ್ ಆಕ್ಷೇಪ

KM-Ganesh [1]

ಮಡಿಕೇರಿ : ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಜ.11 ರಂದು ಮಡಿಕೇರಿಯಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಜನಾಂದೋಲನ ಸಭೆ ನಡೆಯಲಿದ್ದು, ಈ ಸಮಾವೇಶದಲ್ಲಿ ಬಿಜೆಪಿಯೇತರವಾದ ಎಲ್ಲಾ ಪಕ್ಷಗಳು ಪ್ರಮುಖ ಪಾತ್ರ ವಹಿಸಲಿವೆ. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿಕೆ ನೀಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋಮುವಾದಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದ ದೇಶ ಇಂದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜನಧ್ವನಿಯನ್ನು ದಮನ ಮಾಡುತ್ತಿರುವ ಬಿಜೆಪಿಯ ವಿರುದ್ಧ ಎಲ್ಲಾ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಹೋರಾಟಕ್ಕೆ ದುಮುಕಿರುವ ಹೊತ್ತಿನಲ್ಲೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಗತಿಪರರ ಜನಾಂದೋಲನ ವೇದಿಕೆ ನಡೆಸಿದ ಯಾವುದೇ ಪೂರ್ವಭಾವಿ ಸಭೆಗೆ ಹಾಜರಾಗದೆ ಎಲ್ಲವೂ ನಮ್ಮಿಂದಲೇ ಎಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವನ್ನು ವಹಿಸಿಕೊಳ್ಳುತ್ತದೆ ಎಂದು ಆ ಪಕ್ಷದ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಆದರೆ ಕಳೆದ ವಾರ ಕಾಂಗ್ರೆಸ್ ವತಿಯಿಂದ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲವೇ ಮಂದಿ ಯಾಕೆ ಇದ್ದರು ಪ್ರಶ್ನಿಸಿದ್ದಾರೆ. ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿಕೊಂಡ ಕಾಂಗ್ರೆಸ್ ಕೆಲವರನ್ನಷ್ಟೇ ಸೇರಿಸಿಕೊಂಡು ಪ್ರತಿಭಟನೆ ನಡೆಸಿದೆ. ಪರಿಸ್ಥಿತಿ ಹೀಗಿರುವಾಗ ಜಾತ್ಯತೀತ ಜನತಾದಳ, ಎಸ್‌ಡಿಪಿಐ, ಸಿಪಿಐಎಂ, ಸಿಪಿಐಎಂಎಲ್, ಬಿಎಸ್‌ಪಿ, ಕಾಂಗ್ರೆಸ್ ದಲಿತ ಸಂಘಟನೆಗಳು ಸೇರಿದಂತೆ ಪ್ರಗತಿಪರ ಸಂಘಟನೆಗಳು, ಅಪ್ಪಟ ದೇಶಪ್ರೇಮಿಗಳು, ಎಲ್ಲಾ ಸಮಾಜಗಳ ಬಾಂಧವರು ಸೇರಿ ನಡೆಸುತ್ತಿರುವ, ಸಾವಿರಾರು ಮಂದಿ ಪಾಲ್ಗೊಳ್ಳುವ ಸಮಾವೇಶವನ್ನು ತನ್ನದೆಂದು ಹೇಳಿಕೊಳ್ಳುವ ಮೂಲಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಮ್ಮ ರಾಜಕೀಯ ವೈಫಲ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಗಣೇಶ್ ಟೀಕಿಸಿದ್ದಾರೆ.

ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಎಲ್ಲರೂ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಕಟ್ಟಿದ ಪ್ರಗತಿಪರರ ಜನಾಂದೋಲನ ವೇದಿಕೆಯಲ್ಲಿ ರಾಜಕೀಯ ಲಾಭಕ್ಕಾಗಿ ಒಡಕು ಮೂಡಿಸುವ ಕಾರ್ಯಕ್ಕೆ ಯಾರೂ ಕೈಹಾಕಬಾರದೆಂದು ಅವರು ಒತ್ತಾಯಿಸಿದ್ದಾರೆ.

ಸ್ವಾರ್ಥ ರಾಜಕಾರಣಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಬಲಿಯಾಗದೆ ಬಿಜೆಪಿಯೇತರ ಶಕ್ತಿಗಳು ಒಂದೇ ವೇದಿಕೆಯಡಿ ನಡೆಸುತ್ತಿರುವ ಸಮಾವೇಶಕ್ಕೆ ಬೆಂಬಲ ಸೂಚಿಸಲಿ ಮತ್ತು ತಮ್ಮ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಿ ಎಂದು ಗಣೇಶ್ ಹೇಳಿದ್ದಾರೆ.

ಜ.೧೧ ರಂದು ಸಿಎಎ ವಿರುದ್ಧ ನಡೆಯುವ ಜನಾಂದೋಲನ ಸಭೆಗೆ ಜಾತ್ಯತೀತ ಜನತಾದಳ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಎಲ್ಲಾ ವರ್ಗದ ಜನರು ಮುಂದೆ ಬರಬೇಕೆಂದು ಅವರು ಕರೆ ನೀಡಿದ್ದಾರೆ.