- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ : ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಲು ಕೇರಳ ಸಿಎಂ ಒತ್ತಾಯ

pinarayi [1]

ನವದೆಹಲಿ : ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ.

ಕೇರಳ ವಿಧಾನಸಭೆ ಕಳೆದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿತ್ತು. ಎಲ್ಲಾ ಪಕ್ಷದ ಶಾಸಕರೂ ಸಿಎಎ ಕೇರಳದಲ್ಲಿ ಜಾರಿಯಾಗಬಾರದು ಎಂದು ಒಮ್ಮತದ ನಿರ್ಣಯ ತೆಗೆದುಕೊಂಡಿದ್ದರು. ಅಲ್ಲದೆ, ದೇಶಾದ್ಯಂತ ಪ್ರತಿಭಟನೆಗೆ ಕಾರಣವಾದ ಈ ವಿವಾದಾತ್ಮಕ ಶಾಸನವನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು.

ಕೇರಳ ವಿಧಾನಸಭೆಯಲ್ಲಿ ಈ ನಿರ್ಣಯವನ್ನು ಮಂಡಿಸಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ರಾಷ್ಟ್ರವನ್ನು ಕೋಮುವಾದಿಗಳಂತೆ ವಿಭಜನೆ ಮಾಡುವ ಆರ್ಎಸ್ಎಸ್ ಕಾರ್ಯಸೂಚಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ” ಎಂದು ಆರೋಪಿಸಿದ್ದರು. ನಿರ್ಣಯವನ್ನು ಕೇರಳ ವಿಧಾನಸಭೆ ಅಂಗೀಕರಿಸಿದ ನಂತರ ಸಿಎಎ ಜಾರಿಗೊಳಿಸದಂತೆ ಎಲ್ಲಾ ರಾಜ್ಯದ ಸಿಎಂಗಳಿಗೂ ಪಿಣರಾಯಿ ವಿಜಯನ್ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದರು. ಅಲ್ಲದೆ, ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲೂ ಕೇರಳ ಸರ್ಕಾರದ ಪರ ಮೊಕದ್ದಮೆ ದಾಖಲಿಸಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಪಿಣರಾಯಿ ವಿಜಯನ್, “ಸಿಎಎ ಹೆಸರಿನಲ್ಲಿ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಅಸ್ಥಿತ್ವಕ್ಕೆ ಬರುವುದಿಲ್ಲ. ಕೇರಳ ರಾಜ್ಯಕ್ಕೆ ಜಾತ್ಯತೀತತೆಯ ಸುದೀರ್ಘ ಇತಿಹಾಸವಿದೆ. ಗ್ರೀಕರು, ರೋಮನ್ನರು, ಅರಬ್ಬರು ಎಲ್ಲರೂ ನಮ್ಮ ಭೂಮಿಯನ್ನು ತಲುಪಿದರು. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಆರಂಭದಲ್ಲಿಯೇ ಕೇರಳವನ್ನು ತಲುಪಿದ್ದರು. ನಮ್ಮ ಸಂಪ್ರದಾಯ ಎಲ್ಲರನ್ನೂ ಒಳಗೊಳ್ಳುತ್ತದೆ. ನಮ್ಮ ವಿಧಾನಸಭೆ ಎಲ್ಲಾ ಸಂಪ್ರದಾಯವನ್ನು ಜೀವಂತವಾಗಿರಿಸಬೇಕಾಗಿದೆ”ಎಂದು ಅಭಿಪ್ರಾಯಪಟ್ಟಿದ್ದರು.

ಸಿಎಎ ಅನುಷ್ಠಾನವನ್ನು “ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆ” ಎಂದು ಜರಿದ ಕೇರಳ ಸಿಎಂ, “ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ಸಿಎಎ 2019 ವಿವಿಧ ಸಮುದಾಯಗಳಲ್ಲಿ ಕಳವಳವನ್ನು ಉಂಟುಮಾಡಿದೆ. ಇದರ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ. ಕೇರಳದಲ್ಲಿ ಸಾಮಾನ್ಯವಾಗಿ ಶಾಂತಿಯುತ ಮತ್ತು ಬಿಚ್ಚಿದ ಆಂಲದೋಲನ ನಡೆದಿದೆ. ಪೌರತ್ವ ನೀಡಲು ಹೊಸ ಮಾರ್ಗಸೂಚಿಗಳನ್ನು ರೂಪಿಸಿರುವ ಈ ಕಾಯಿದೆಯು ಸಂವಿಧಾನದ ಭಾಗ 3 ರಲ್ಲಿ ಉಲ್ಲೇಖಿಸಿರುವಂತೆ ಸಮಾನತೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ತಿಳಿಸಿದ್ದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ 11 ರಂದು ರಾಜ್ಯಸಭೆಯಲ್ಲಿ ಪೌರತ್ವ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು “ಅಸಂವಿಧಾನಿಕ ಮಸೂದೆಗೆ” ಕೇರಳದಲ್ಲಿ ಸ್ಥಾನವಿಲ್ಲ ಮತ್ತು ರಾಜ್ಯವು ಅದನ್ನು ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.