- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜನವರಿ 18ರಂದು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಷಾ ಆಗಮನ

amith [1]

ಬೆಂಗಳೂರು : ಜನವರಿ 18ರ ಶನಿವಾರ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಗರಿಗೆದರಿದೆ.

ಅಮಿತ್ ಷಾ ಭೇಟಿಗೆ ಉತ್ಸುಕರಾಗಿರೋ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಷಾ ಮುಂದೆ ಚರ್ಚಿಸಲು ಸಿದ್ಧತೆ ನಡೆಸಿದ್ದಾರೆ. ಹಾಗಾಗಿ ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರಿದೆ.

ಅಮಿತ್ ಷಾ ಭೇಟಿ ವೇಳೆ ಕೆಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲು ಮುಖ್ಯಮಂತ್ರಿ ಅವರು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿನ ಪ್ರಮುಖ ವಿಷಯಗಳ ಪಟ್ಟಿ ಇಲ್ಲಿದೆ.

ಸಂಪುಟ ವಿಸ್ತರಣೆಯೋ ಅಥವಾ ಸಂಪುಟ ಪುನರ್ ರಚನೆಯೋ ಎಂಬ ಬಗ್ಗೆ ಅಮಿತ್ ಷಾ ಅವರಿಂದ ಮೊದಲು ಸ್ಪಷ್ಟನೆ ಪಡೆದುಕೊಳ್ಳಲಿದ್ದಾರೆ ಸಿಎಂ.

ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದರೆ ತಕ್ಷಣ ದಿನಾಂಕ ನಿಗದಿ ಹಾಗೂ ಸಂಪುಟಕ್ಕೆ ಸೇರ್ಪಡಿಸಿಕೊಳ್ಳುವ ಸಚಿವಾಕಾಂಕ್ಷಿಗಳ ಬಗ್ಗೆ ಚರ್ಚೆ ನಡೆಯಲಿದೆ.

ಗೆದ್ದ ಅನರ್ಹರ ಪೈಕಿ 11 ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಅಮಿತ್ ಷಾ ಮುಂದೆ ಮುಖ್ಯಮಂತ್ರಿ ಪ್ರಸ್ತಾಪ ಮಾಡಲಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ನಿಲುವು ಬಗ್ಗೆ ಸಮಾಲೋಚನೆ ನಡೆಯಲಿದೆ.

ಬಿಜೆಪಿ ಸಚಿವಾಕಾಂಕ್ಷಿಗಳಲ್ಲಿ ಯಾರಿಗೆಲ್ಲ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದ್ದು ಷಾ ಅಭಿಪ್ರಾಯಕ್ಕೆ ಕಾಯಲಾಗುತ್ತಿದೆ.

ಹಾಗೇನಾದರೂ ಸಂಪುಟ ವಿಸ್ತರಣೆಗೆ ಅಮಿತ್ ಷಾ ಸ್ಪಂದಿಸದಿದ್ದರೆ ಕೆಲವು ಪ್ರಮುಖ ವಿಚಾರ ಚರ್ಚೆ ನಡೆಸುವ ಬಗ್ಗೆ ಮುಖ್ಯಮಂತ್ರಿ ತಯಾರಾಗಿದ್ದಾರೆ.

ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬ ಮಾಡಿದ್ರೆ ಗೆದ್ದ ಅನರ್ಹ ಶಾಸಕರ ವಿಶ್ವಾಸ ಕಡಿಮೆಯಾಗುತ್ತೆ ಹಾಗೂ ಈ ಹಿಂದಿನ ಒಪ್ಪಂದದಂತೆ ಬಿಜೆಪಿ ನಡೆದುಕೊಳ್ಳುತ್ತಿಲ್ಲ ಎಂಬ ಸಂದೇಶ ನಾವೇ ನೀಡಿದಂತಾಗುತ್ತದೆ ಎಂಬ ಆತಂಕದಲ್ಲಿ ಸಿಎಂ ಇದ್ದಾರೆ. ಇದನ್ನು ಷಾ ಅವರಿಗೆ ಮನವರಕರ ಮಾಡಿಕೊಡಲಾಗುವುದು.

ಇದನ್ನೇ ಅಸ್ತ್ರ ಮಾಡಿಕೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಗೆದ್ದ ಅನರ್ಹ ಶಾಸಕರನ್ನ ಟೆಂಪ್ಟ್ ಮಾಡಬಹುದು. ಸಂಪುಟ ವಿಸ್ತರಣೆ ವಿಳಂಬದಿಂದ ಮತ್ತಷ್ಟು ಸಚಿವಾಕಾಂಕ್ಷಿಗಳ ಹೆಚ್ಚಳವಾಗಿ ವಿನಾಕಾರಣ ಗೊಂದಲ ಸೃಷ್ಟಿಯಾಗುವ ಆತಂಕವನ್ನು ತಳ್ಳಿ ಹಾಕುವಂತಿಲ್ಲ.

ಆದಷ್ಟು ಬೇಗ ಸಂಪುಟ ವಿಸ್ತರಿಸಿ ಅಭಿವೃದ್ಧಿ ಕಡೆ ಗಮನ ಕೊಡುವುದು ಒಳಿತು ಎಂಬ ಬಗ್ಗೆ ಅಮಿತ್ ಷಾ ಅವರಿಗೆ ಮನವರಿಕೆ ಮಾಡಿಕೊಡಲು ಸಿಎಂ ಬಿಎಸ್ವೈ ಮುಂದಾಗಿದ್ದಾರೆ.