- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದು ಕಲಬುರ್ಗಿಯಲ್ಲಿ ಸಿಎಎ ವಿರುದ್ಧ ಬೃಹತ್​​ ಸಮಾವೇಶ : ಒಂದು ಲಕ್ಷ ಜನ ಸೇರುವ ಸಾಧ್ಯತೆ

kalburgi [1]

ಕಲಬುರ್ಗಿ : ಇಂದು ಕಲಬುರ್ಗಿ ಪೀಪಲ್ಸ್ ಫೋರಂ ನೇತೃತ್ವದಲ್ಲಿ ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್ಸಿ) ವಿರೋಧಿಸಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ನಗರದ ಪೀರ್ ಬಂಗಾಲಿ ಮೈದಾನದಲ್ಲಿ ಮದ್ಯಾಹ್ನ 3 ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೆ ಕಾಂಗ್ರೆಸ್, ಸಿಪಿಐ, ಸಿಪಿಐಎಂ, ಎಸ್.ಯು.ಸಿ.ಐ. ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಎಸ್.ಯು.ಸಿ.ಐ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಸ್ ಸುನೀತ ಕುಮಾರ್ ಮತ್ತಿತರ ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇನ್ನು ಬೃಹತ್ ಸಮಾವೇಶದ ಹಿನ್ನೆಲೆಯಲ್ಲಿ ಪೀರ್ ಬಂಗಾಲಿ ಮೈದಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಮೈದಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಯನ್ನೂ ಬಂದೋಬಸ್ತ್ಗೆ ನಿಯೋಜಿಸಲಾಗಿದೆ. ಕಲಬುರ್ಗಿ ನಗರದ ಆಯಕಟ್ಟಿನ ಸ್ಥಳ ಮತ್ತು ಸಮಾವೇಶ ನಡೆಯೋ ಮೈದಾನ ಮತ್ತಿತರ ಕಡೆ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಸಿಎಎ ಪರ ಸಮಾವೇಶ ಮಾಡಿದ ನಂತರದಲ್ಲಿ ಪೌರತ್ವ ಕಾಯ್ದೆ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ಇದಾಗಿದೆ. ಅಲ್ಲದೇ ಕಲಬುರ್ಗಿಯಲ್ಲಿ ನಾಗರೀಕ ಸಮಿತಿ ಸಿಎಎ ಪರ ಹಮ್ಮಿಕೊಂಡಿದ್ದ ಬೃಹತ್ ಮೆರವಣಿಗೆ ನಂತರ ನಡೆಯುತ್ತಿರುವ ಸಿಎಎ ವಿರೋಧಿ ಬೃಹತ್ ಸಮಾವೇಶ ಇದಾಗಿದೆ.

ರಾಷ್ಟ್ರಮಟ್ಟದ ಘಟಾನುಘಟಿ ನಾಯಕರು ಕಲಬುರ್ಗಿಗೆ ಆಗಮಿಸಿ, ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಪೌರತ್ವ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಲಿದ್ದಾರೆ. ಹಾಗಯೇ ಪೌರತ್ವ ಮಸೂದೆ ಸಮಾವೇಶಕ್ಕೆ ಭಾಗಿಯಾಗಲಿ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕವೂ ಜನ ಆಗಮಿಸುತ್ತಿದ್ದಾರೆ. ಸುರಪುರ, ಯಾದಗಿರಿ, ರಾಯಚೂರು ಜಿಲ್ಲೆ ಮತ್ತಿತರ ಕಡೆಗಳಿಂದ ಜನ ಪಾದಯಾತ್ರೆ ಮೂಲಕ ಕಲಬುರ್ಗಿಗೆ ಆಗಮಿಸುತ್ತಿದ್ದಾರೆ.