- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಂಗಳೂರು : ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

siddaramaiah [1]

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕಾಗಿ ಪಕ್ಷದ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದ್ದು, ಎರಡು ಹುದ್ದೆ ವಿಭಜನೆಗೆ ವಿರೋಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಬಹಿರಂಗವಾಗಿಯೇ ತಿರುಗೇಟು ನೀಡಿದ್ದಾರೆ. ಹೊಸ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆಯೇ ಪ್ರತಿಭಟನೆ ಮಾಡುವ ಮೂಲಕ ನಾಯಕತ್ವದ ಗಲಾಟೆಯನ್ನು ಬೀದಿಗೆ ತಂದಿದ್ದಾರೆ. ಇದರ ಹಿಂದೆ ಡಿ.ಕೆ.ಶಿವಕುಮಾರ್‌ ಆಪ್ತರು ಸೇರಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡು ಹುದ್ದೆಗಳು ಪ್ರತ್ಯೇಕವಾಗಬೇಕೆಂದು ಪರಮೇಶ್ವರ್‌ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್‌, ತಾವು ಗುಂಪು ಕಟ್ಟಿಕೊಂಡು ಹೈಕಮಾಂಡ್‌ ಮುಂದೆ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಸಿದ್ದರಾಮಯ್ಯ ವಿರುದ್ಧವೇ ಕಾಂಗ್ರೆಸ್‌ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂದೆಯೇ ಪ್ರತಿಭಟನೆ ಮಾಡುವ ಮೂಲಕ ಎರಡೂ ಬಣಗಳ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬರುವಂತೆ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಹೆಸರು ಮುಂಚೂಣಿಯಲ್ಲಿದೆ ಎಂದು ಗೊತ್ತಾದ ತಕ್ಷಣ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವಂತೆ ಸಿದ್ದರಾಮಯ್ಯ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಅದನ್ನು ಬಹಿರಂಗ ವಾಗಿಯೇ ಹೇಳಿದ್ದರು. ಆದರೆ, ಮೂಲ ಕಾಂಗ್ರೆಸ್ಸಿಗರು ಅವರ ಪ್ರಯತ್ನಕ್ಕೆ ತೆರೆಮರೆಯಲ್ಲಿ ಕಾರ್ಯಾಧ್ಯಕ್ಷರ ನೇಮಕವಾಗದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದರು. ಆದರೆ, ಸೋಮವಾರ ಡಾ.ಜಿ.ಪರಮೇಶ್ವರ್‌, ಸಿದ್ದರಾಮಯ್ಯ ಅವರ ಪ್ರಯತ್ನಕ್ಕೆ ತದ್ವಿರುದ್ಧ ಹೇಳಿಕೆ ನೀಡುವ ಮೂಲಕ ನೇರವಾಗಿಯೇ ತಿರುಗಿ ಬಿದ್ದಿದ್ದಾರೆ.

ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷದ ನಾಯಕ ಎರಡೂ ಹುದ್ದೆಗಳು ವಿಭಜನೆ ಮಾಡದಂತೆ ನೀಡಿರುವ ಹೇಳಿಕೆಗೆ ಬಹಿರಂಗವಾಗಿಯೇ ಪರಮೇಶ್ವರ್‌ ತಿರುಗೇಟು ನೀಡಿರುವುದು ಎರಡೂ ಬಣಗಳ ನಾಯಕರ ನಡುವಿನ ಆಂತರಿಕ ಸಂಘರ್ಷ ಬಹಿರಂಗಗೊಂಡಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಕೆ.ಶಿವಕುಮಾರ್‌ ಕೂಡ ಸಿದ್ದರಾಮಯ್ಯ ಹೇಳಿಕೆಗಳಿಗೆ ತಿರುಗೇಟು ನೀಡಿದ್ದು,

ನಾನು ದೆಹಲಿಗೆ ಗುಂಪು ಕಟ್ಟಿಕೊಂಡು ಹೋಗುವುದಿಲ್ಲ ಎನ್ನುವ ಮೂಲಕ ಇತ್ತೀಚೆಗೆ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಬದಲು ಎಂ.ಬಿ.ಪಾಟೀಲರನ್ನು ನೇಮಿಸುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ಯಾರ್ಯಾರು ಎಷ್ಟೆಷ್ಟು ಬಣ ಸೃಷ್ಟಿಸಿಕೊಳ್ಳುತ್ತಾರೆಯೋ ಸೃಷ್ಠಿಸಿಕೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷರ ನೇಮಕದ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ವ್ಯಕ್ತಿ ಪೂಜೆ ಮಾಡುವುದಿಲ್ಲ. ಪಕ್ಷದ ಪೂಜೆ ಮಾಡುವವನು ಎಂದು ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸ್‌ ನಾಯಕರ ನಡುವೆ ಶೀತಲ ಸಮರ ಆರೋಪ ಪ್ರತ್ಯಾರೋಪಗಳ ಮೂಲಕ ಬಯಲಿಗೆ ಬಂದಿದ್ದರೆ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಲರಾಮ್‌ ಎನ್ನುವವರು ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಮೂಲ ಕಾಂಗ್ರೆಸ್‌ ಬಣದ ಅಸಮಾಧಾನ ಇರುವುದನ್ನು ಬಹಿರಂಗಗೊಳಿಸಿದ್ದಾರೆ.

ಪಕ್ಷದ ಕಚೇರಿ ಎದುರೇ ಪಕ್ಷದ ನಾಯಕನ ವಿರುದ್ಧ ಬಹಿರಂಗ ಪ್ರತಿಭಟನೆ ಮಾಡಿರುವುದರ ಹಿಂದೆ ಮೂಲ ಕಾಂಗ್ರೆಸ್‌ ನಾಯಕರು ಇದ್ದಿರಬಹುದು ಎಂಬ ಮಾತುಗಳು ಸಿದ್ದರಾಮಯ್ಯ ಬಣದಲ್ಲಿ ಕೇಳಿರುತ್ತಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಲರಾಮ್‌, ಮಂಜುನಾಥ ಹಾಗೂ ಕೆಂಚೇಗೌಡ ಮೂಲ ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದು, ಎನ್‌ಎಸ್‌ಯುಐನಿಂದಲೂ ಕಾಂಗ್ರೆಸ್‌ನಲ್ಲಿ ವಿವಿಧ ಹಂತದಲ್ಲಿ ಪಕ್ಷದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿರಿಯ ನಾಯಕರಿಗೆ ಆತಂಕ: ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಳಂಬವಾದರೆ ಮತ್ತೆ ಏನಾದರೂ ಬದಲಾವಣೆ ಆಗುತ್ತದೆ ಎಂಬ ಆತಂಕ ಮೂಲ ಕಾಂಗ್ರೆಸ್ಸಿಗರಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಹುತೇಕ ಡಿ.ಕೆ.ಶಿವಕುಮಾರ್‌ ಹೆಸರು ಅಂತಿಮವಾಗಿದೆ ಎಂದು ಹೇಳಲಾಗುತ್ತಿದ್ದು, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್‌ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

ಆದರೆ, ಹೈಕಮಾಂಡ್‌ ದಿನೇಶ್‌ ಗುಂಡೂರಾವ್‌ ಅವರಿಗೆ ಹೊಸ ಅಧ್ಯಕ್ಷರನ್ನು ನೇಮಿಸುವವರೆಗೂ ಸಕ್ರಿಯರಾಗಿ ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ ಎನ್ನುವುದು ಮತ್ತಷ್ಟು ವಿಳಂಬವಾಗುತ್ತದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ. ವಿಳಂಬವಾದಷ್ಟು ಸಿದ್ದರಾಮಯ್ಯ ಬಣದವರು ಪರ್ಯಾಯ ಕಾರ್ಯತಂತ್ರ ರೂಪಿಸಿ, ಈಗ ಹೈಕಮಾಂಡ್‌ ಮಾಡಲು ಮುಂದಾಗಿರುವ ನಿರ್ಣಯವನ್ನು ಬದಲಾಯಿಸುವ ಸಾಧ್ಯತೆಗಳಿವೆ ಎನ್ನುವ ಕಾರಣಕ್ಕೆ ಮೂಲ ಕಾಂಗ್ರೆಸ್‌ ನಾಯಕರು ಆದಷ್ಟು ಬೇಗ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸುವಂತೆ ಆಗ್ರಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗುತ್ತಿರುವುದರಿಂದ ಆದಷ್ಟು ಬೇಗ ನೇಮಕ ಮಾಡುವಂತೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರಿಗೆ ಇ-ಮೇಲ್‌ ಮೂಲಕ ಪರಮೇಶ್ವರ್‌ ಪತ್ರ ಬರೆದಿದ್ದು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬ ಆಗುವುದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತ್ತದೆ. ಅಲ್ಲದೇ ಅನಗತ್ಯ ಗೊಂದಲಗಳಿಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆಂದು ತಿಳಿದು ಬಂದಿದೆ.