- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಶಸ್ತಿ ಸುತ್ತಿಗೇರಿದ ಆಸ್ಟ್ರೇಲಿಯಾದ ಡೊಮಿನಿಕ್ ಥೀಮ್ : ನಾಳೆ ನೊವಾಕ್ ಜೋಕೊವಿಕ್ ವಿರುದ್ಧ ಫೈನಲ್ ಹಣಾಹಣಿ

ashtrelia [1]

ಮೆಲ್ಬೋರ್ನ್ : ಆಸ್ಟ್ರೇಲಿಯಾದ ಡೊಮಿನಿಕ್ ಥೀಮ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದು, ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ವಿರುದ್ಧ ಭಾನುವಾರ ಪ್ರಶಸ್ತಿ ಹೋರಾಟ ನಡೆಸಲಿದ್ದಾರೆ.

ರಾಡ್ ಲೆವರ್ ಅರೆನಾದಲ್ಲಿ ಶುಕ್ರವಾರ ನಡೆದ ಯುವ ಆಟಗಾರರ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಥೀಮ್ 3-6, 6-4, 7-6 (7-3), 7-6 (7-4) ಸೆಟ್ಗಳಿಂದ 7ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಗೆಲುವು ದಾಖಲಿಸಿದರು. 3 ಗಂಟೆ 42 ನಿಮಿಷಗಳ ಹೋರಾಟದಲ್ಲಿ ಮೊದಲ ಸೆಟ್ ಸೋಲಿನ ಬಳಿಕ ತಿರುಗೇಟು ನೀಡಿದ 26 ವರ್ಷದ ಥೀಮ್ ಮೆಲ್ಬೋರ್ನ್ನಲ್ಲಿ ಇದೇ ಮೊದಲ ಬಾರಿಗೆ ಫೈನಲ್ಗೇರಿದ ಸಾಧನೆ ಮಾಡಿದ್ದಾರೆ.

ಥೀಮ್ ಗ್ರಾಂಡ್ ಸ್ಲಾಂನಲ್ಲಿ 3ನೇ ಬಾರಿ ಫೈನಲ್ಗೇರಿದ್ದಾರೆ. ಈ ಹಿಂದೆ 2 ಬಾರಿ ಫ್ರೆಂಚ್ ಓಪನ್ನಲ್ಲಿ (2019, 2018) ಫೈನಲ್ಗೇರಿ ರನ್ನರ್ಅಪ್ ಆಗಿದ್ದರು. ಕಳೆದೆರಡು ದಶಕಗಳಲ್ಲಿ ಜೋಕೊವಿಕ್, ನಡಾಲ್, ಫೆಡರರ್ ಅವರೇ ಹೆಚ್ಚಿನ ಗ್ರಾಂಡ್ ಸ್ಲಾಂಗಳನ್ನು ಜಯಿಸಿದ್ದು, ಈ ‘ಬಿಗ್ ತ್ರಿ’ ಪ್ರಾಬಲ್ಯಕ್ಕೆ ತೆರೆ ಎಳೆಯುವ ಉತ್ತಮ ಅವಕಾಶ ಥೀಮ್ ಮುಂದಿದೆ. ಅಲ್ಲದೆ 1990ರ ನಂತರ ಜನಿಸಿ ಗ್ರಾಂಡ್ ಸ್ಲಾಂ ಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ.

ಫ್ರಾನ್ಸ್ನ ಕ್ರಿಸ್ಟಿನಾ ಮ್ಲಾಡೆನೋವಿಕ್ ಮತ್ತು ಹಂಗೆರಿಯ ಟಿಮಿಯಾ ಬಬೋಸ್ ಮಹಿಳಾ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. 2ನೇ ಶ್ರೇಯಾಂಕಿತ ಜೋಡಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಚೀನಾ ತೈಪೆಯ ಸು ವೀ ಶೀಹ್ ಮತ್ತು ಜೆಕ್ ಗಣರಾಜ್ಯದ ಬರ್ಬೆರಾ ಸ್ಟೈಕೋವಾ ಜೋಡಿಗೆ 6-2, 6-1 ನೇರಸೆಟ್ಗಳಿಂದ ಆಘಾತ ನೀಡಿತು. ಮ್ಲಾಡೆನೋವಿಕ್-ಬಬೋಸ್ ಜೋಡಿಗೆ ಜತೆಯಾಗಿ ಇದು 3ನೇ ಮತ್ತು ಒಟ್ಟಾರೆಯಾಗಿ 10ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.

ಸ್ಟಾರ್ ಆಟಗಾರ್ತಿಯರೆಲ್ಲ ಆಘಾತ ಎದುರಿಸಿದ ಟೂರ್ನಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಗಾರ್ಬಿನ್ ಮುಗುರುಜಾ ಮತ್ತು ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಶನಿವಾರ ಪ್ರಶಸ್ತಿ ಹೋರಾಟ ನಡೆಸಲಿದ್ದಾರೆ. ಸ್ಪೇನ್ ತಾರೆ ಮುಗುರುಜಾ 3ನೇ ಗ್ರಾಂಡ್ ಸ್ಲಾಂ ಗೆಲುವಿನ ಮೇಲೆ ಕಣ್ಣಿಟ್ಟಿದ್ದರೆ, 21 ವರ್ಷದ ಕೆನಿನ್ ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನ ಹಂಬಲದಲ್ಲಿದ್ದಾರೆ.

12 ತಿಂಗಳ ಹಿಂದಷ್ಟೇ ಚೊಚ್ಚಲ ಡಬ್ಲ್ಯುಟಿಎ ಪ್ರಶಸ್ತಿ ಜಯಿಸಿರುವ ರಷ್ಯಾ ಮೂಲದ ಕೆನಿನ್, ಫೈನಲ್ನಲ್ಲಿ ಸೋತರೂ ಮುಂದಿನ ವಾರ ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ 10ರೊಳಗೆ ಸ್ಥಾನ ಸಂಪಾದಿಸಲಿದ್ದಾರೆ. ಕೆನಿನ್ ವಿರುದ್ಧದ ಹಿಂದಿನ ಏಕೈಕ ಮುಖಾಮುಖಿಯಲ್ಲಿ ಸೋತಿದ್ದರೂ, 26 ವರ್ಷದ ಮುಗುರುಜಾ ಫೈನಲ್ನಲ್ಲಿ ಫೇವರಿಟ್ ಆಗಿ ಕಣಕ್ಕಿಳಿಯಲಿದ್ದಾರೆ. 2016ರ ಫ್ರೆಂಚ್ ಓಪನ್ ಮತ್ತು 2017ರ ವಿಂಬಲ್ಡನ್ ಗೆಲುವಿನ ಅನುಭವ ಅವರಿಗೆ ಇರುವುದು ಇದಕ್ಕೆ ಕಾರಣ. ಸದ್ಯ 32ನೇ ರ್ಯಾಂಕ್ಗೆ ಕುಸಿದಿರುವ ಮಾಜಿ ವಿಶ್ವ ನಂ. 1 ಮುಗುರುಜಾಗೆ ಮೆಲ್ಬೋರ್ನ್ನಲ್ಲಿ ಇದು ಮೊದಲ ಫೈನಲ್ ಆಗಿದೆ.