- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು : ವಿವಿ ಕುಲಪತಿ

VV-Kulapati [1]

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದರೊಂದಿಗೆ, ಸಣ್ಣ ವೆಚ್ಚಕ್ಕೂ ನಿಯಂತ್ರಣ ಹಾಕಿದರೆ ಸಾಕಷ್ಟು ಆಂತರಿಕ ಸಂಪನ್ಮೂಲ ಕ್ರೋಡೀಕರಿಸಬಹುದು. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ಮೊತ್ತವನ್ನು ತಂದು ವಿವಿ ಸೇರಿದಂತೆ ಕೊಣಾಜೆ ಗ್ರಾಮದ ಅಭಿವೃದ್ಧಿಗೂ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾ ಸಂವಾದಲ್ಲಿ ಅವರು ಮಾತನಾಡಿದರು.

ಪ್ರತಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಅದರ ಪರಿಣಾಮದ ಕುರಿತು ಮುಂದಾಲೋಚನೆ ವಹಿಸಿ ಜಾರಿಗೆ ತರಲಾಗುತ್ತಿದೆ. ದೇಶದಲ್ಲೇ ವಿಭಿನ್ನ ವಿಶ್ವವಿದ್ಯಾಲಯವನ್ನಾಗಿ ಮಾಡುವ ಉದ್ದೇಶದಿಂದ ಅಧಿಕಾರಕ್ಕೆ ಬಂದಿದ್ದು, ಮೊದಲ ದಿನದಿಂದಲೇ ಈ ನಿಟ್ಟಿ ಹೆಜ್ಜೆ ಇಟ್ಟಿದ್ದೇನೆ ಎಂದರು.

ವಿಶ್ವವಿದ್ಯಾಲಯದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 7 ಎಕರೆ ಅತಿಕ್ರಮಣಕ್ಕೆ ಒಳಗಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದ ಜಮೀನಿನ ಸುತ್ತಲೂ ಭದ್ರವಾದ ಆವರಣಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒತ್ತವರಿಯಾದ ಜಾಗದಲ್ಲಿ ಬೇಲಿ ನಿರ್ಮಿಸಲಾಗುವುದು. ವಿವಿ ಆವರಣದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದರ ಜತೆ ರಾಜ್ಯಪಾಲರ ಅನುಮತಿ ಸಿಕ್ಕಿದರೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯ ಸಿಬ್ಬಂದಿ ನಿಯೋಜಿಸುವ ಕುರಿತೂ ಚಿಂತನೆ ನಡೆಸಲಾಗಿದೆ ಎಂದರು.

ವಿಶ್ವವಿದ್ಯಾಲಯದ ಇಕೋ ಫ್ರೆಂಡ್ಲಿಯಾಗುವ ಜತೆಗೆ ಕ್ಲೀನ್, ಗ್ರೀನ್, ಫಿಟ್ ಕ್ಯಾಂಪಸ್ ಮಾಡುವ ಉದ್ದೇಶವಿದೆ.

ವಿದ್ಯಾರ್ಥಿ ಪ್ರಥಮ ವರ್ಷ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶ ಪಡೆದಾಗ ಆತ ಕ್ಯಾಂಪನ್ ಒಳಗಡೆ ಒಂದು ಗಿಡ ನೆಡಬೇಕು. ಎರಡು ವರ್ಷಗಳ ಕಾಲ ಆತನೇ ಆ ಗಿಡದ ಪೋಷಕ. ಆ ಸಸಿಗೆ ಬಾರ್ ಕೋಡ್ ವ್ಯವಸ್ಥೆ ಅಳವಡಿಸಿ, ಗಿಡ ನೆಟ್ಟ ವಿದ್ಯಾರ್ಥಿಯ ಹೆಸರು, ಕೋರ್ಸ್, ದಿನಾಂಕ ಸೇರಿದಂತೆ ವಿವರಗಳು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಹತ್ತು ವರ್ಷದ ಬಳಿಕ ವಿದ್ಯಾರ್ಥಿ ಕ್ಯಾಂಪಸ್ ಬಂದಾಗ ತಾನು ನೆಟ್ಟ ಗಿಡ ಮರವಾಗಿರುವುದನ್ನು ನೋಡಿ ಆನಂದಿಸಬಹುದು.

ಫಿಟ್ ಕ್ಯಾಂಪಸ್ ಭಾಗವಾಗಿ ಹಾಸ್ಟೆಲ್ ಹಾಗೂ ಕಾಲೇಜಿನಲ್ಲಿ ಜಿಮ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಬ್ಲಿಕ್ ಜಿಮ್ ಪಾರ್ಕನ್ನೂ ಕ್ಯಾಂಪಸ್‌ನಲ್ಲಿ ಆರಂಭಿಸಲಾಗುವುದು. ಕ್ಯಾಂಪಸ್‌ನಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಬ್ಯಾಟರಿ ಚಾಲಿತ ಬಗ್ಗೀಸ್, ಸೈಕಲ್‌ಗಳಿಗೆ ಮಾತ್ರ ಅವಕಾಶ ನೀಡಲು ಉದ್ದೇಶಿಸಲಾಗಿದೆ. ನಾಲ್ಕು ವರ್ಷದೊಳಗೆ ಸಾರ್ವಜನಿಕ ರಸ್ತೆಯನ್ನು ಪಿಡಬ್ಲೂೃಡಿ ಇಲಾಖೆ ಸಹಕಾರದಿಂದ ಕ್ಯಾಂಪಸ್‌ನಿಂದ ಹೊರಗೆ ನಿರ್ಮಿಸಲಾಗುವುದು ಎಂದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.