- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತುಳು ಸಿನಿಮಾ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ

Telikeda Bolli [1]ಮಂಗಳೂರು :ತುಳು ರಂಗಭೂಮಿಯಲ್ಲಿ ಅತ್ಯಂತ ಪ್ರಸಿದ್ಧಿ ಪಡೆದು ತೆಲಿಕೆದ ಬೊಳ್ಳಿ ಎಂಬ ಬಿರುದು ಹೊಂದಿರುವ ಪ್ರಸಿದ್ಧ ನಟ ದೇವದಾಸ್ ಕಾಪಿಕಾಡ್ ಅವರ ನೇತೃತ್ವದಲ್ಲಿ ನಿರ್ಮಾಣಗೊಂಡಿರುವ ಬಹು ನಿರೀಕ್ಷೆಯ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ನಗರದ ಪ್ರತಿಷ್ಠಿತ ಹೊಟೇಲ್ ಓಶಿಯನ್‌ ಪರ್ಲ್‌ನಲ್ಲಿ ಜರಗಿತು.

ಕನ್ನಡ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್ ತೆಲಿಕೆದ ಬೊಳ್ಳಿ ಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿದರು. ಚಿತ್ರವು ಅತ್ಯುತ್ತಮ ಹಾಡುಗಳನ್ನು ಹೊಂದಿದ್ದು, ದಕ್ಷಿಣ ಕನ್ನಡದಲ್ಲಿ ಉತ್ತಮ ಕಥಾಹಂದರಗಳುಳ್ಳ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಸಂತಸದ ವಿಚಾರ ಎಂದು ಅವರು ಹೇಳಿದರು.

Telikeda Bolli [2]ಚಿತ್ರದ ಕೇಂದ್ರ ಬಿಂದುವಾಗಿರುವ ದೇವದಾಸ್‌ ಕಾಪಿಕಾಡ್‌ ಅವರು ಮಾತನಾಡಿ, ಈ ಚಿತ್ರವನ್ನು ತುಳು ಚಿತ್ರದ ಇತಿಹಾಸದಲ್ಲಿ ಅದ್ದೂರಿ ಮತ್ತು ವಿಭಿನ್ನವಾಗಿ ಮೂಡಿಬರುವಂತೆ ಪ್ರಯತ್ನಿಸಲಾಗಿದೆ. ಇತರ ಭಾಷೆಗಳ ಚಿತ್ರಗಳಂತೆ ತೆಲಿಕೆದ ಬೊಳ್ಳಿಯೂ ಉತ್ತಮ ಗುಣಮಟ್ಟ ಹಾಗೂ ವಿಶೇಷತೆಯನ್ನು ಕಾಯ್ದುಕೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಚಿತ್ರದ ನಿರ್ಮಾಪಕ ಸುಧೀರ್‌ ಕಾಮತ್‌ ಅವರು, ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತೆರೆ ಕಾಣಲು ಸಿದ್ಧವಾಗಿದೆ ಎಂದರು.

ಸಿನಿಮಾ ನಿರ್ದೇಶಕ ಪಿ.ಎಚ್.ವಿಶ್ವನಾಥ್, ಸಹ ನಿರ್ದೇಶಕಿ ಶರ್ಮಿಳಾ ಕಾಪಿಕಾಡ್, ಸಿನಿಮಾ ನಿರ್ಮಾಪಕ ಸುಧೀರ್ ಕಾಮತ್, ಮ್ಯೂಸಿಕ್ ಡಿಸ್ಟ್ರಿಬ್ಯೂಟರ್ ಕಿಶೋರ್ ಮತ್ತಿತರರು ಉಪಸ್ಥಿತರಿದ್ದರು.