- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಳೆಯಂಗಡಿ : ಪಿಡಿಒ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ

haleyangady [1]

ಮಂಗಳೂರು : ಹಳೆಯಂಗಡಿ ಪಿಡಿಒ ಪೂರ್ಣಿಮಾ ಎಂಬುವರ ಮೇಲೆ‌ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ಹಲ್ಲೆ ಖಂಡಿಸಿ ಜಿಲ್ಲೆಯಾದ್ಯಂತ ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕಸಹಾಯಕರು ಸೇರಿದಂತೆ ಪಂಚಾಯತ್ ರಾಜ್ ಇಲಾಖೆಯ ಎಲ್ಲ ಸರ್ಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು. ಹಳೆಯಂಗಡಿ ಗ್ರಾಪಂನ ಇಂದಿರಾ ನಗರದಲ್ಲಿ ನೀರಿನ ಪಂಪ್ ಚಾಲಕ‌ ತಾತ್ಕಾಲಿಕ‌ ಗೈರು ಹಾಜರಾಗಿರೋದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನೀರು ಸರಬರಾಜು ಮಾಡಲು ಪಿಡಿಒ ಪೂರ್ಣಿಮಾ ತೆರಳಿದ್ದರು‌. ಈ ಸಂದರ್ಭ ಮಜೀದ್, ಶರೀಫ್ ಹಾಗೂ ಮತ್ತೊರ್ವ ನೀರು ಸರಬರಾಜು ಮಾಡಲು ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ವೀಡಿಯೋ ಚಿತ್ರೀಕರಣ ಮಾಡಿ, ಹಲ್ಲೆಗೂ ಯತ್ನಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪಿಡಿಒ ಪೂರ್ಣಿಮಾ ದೂರು ನೀಡಿದ್ದರು. ಆದರೆ ಪ್ರಕರಣ ನಡೆದು 24 ಗಂಟೆಗಳು ಕಳೆದರೂ ಇನ್ನೂ ಆರೋಪಿಗಳ‌ ಬಂಧನವಾಗಿಲ್ಲ. ಹೀಗಾಗಿ ನಾಳೆ ಕಚೇರಿಗೆ ಹಾಜರಾದರೂ ಕುಡಿಯುವ ನೀರು ಪೂರೈಕೆಯಂತಹ ಮೂಲಭೂತ ಸೌಲಭ್ಯದ ಹೊರತಾಗಿ ಬೇರೆ ಯಾವುದೇ ಸೇವೆ ಒದಗಿಸದೆ ಪೆನ್ ಡೌನ್ ಧರಣಿ ನಡೆಸಲಾಗುವುದು ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದವರು ಎಚ್ಚರಿಸಿದ್ದಾರೆ.

ನಾಳೆಯೂ ಆರೋಪಿಗಳ ಬಂಧನವಾಗದಿದ್ದಲ್ಲಿ ಬುಧವಾರದಿಂದ ಸಾಮೂಹಿಕ ರಜೆಯಲ್ಲಿ ತೆರಳುವುದಾಗಿ ಪಿಡಿಒ ಸಂಘದಿಂದ ಕೈಗೊಳ್ಳಲಾದ ನಿರ್ಣಯವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪಿಡಿಒ ಕ್ಷೇಮಾಭಿವೃದ್ಧಿ ಸಂಘದವರು ತಿಳಿಸಿದ್ದಾರೆ. ಬಳಿಕ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.