- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನರೇಗಾ ಯೋಜನೆಯಡಿ ಕರ್ನಾಟಕಕ್ಕೆ 2.3 ಲಕ್ಷ ಕೋಟಿ ರೂ. ಬಿಡುಗಡೆ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

nirmala-seetharaman [1]

ಬೆಂಗಳೂರು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕರ್ನಾಟಕಕ್ಕೆ ಕೇಂದ್ರದ ಅನುದಾನ 2.3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಸಚಿವರು, ಉದ್ಯೋಗ ಖಾತರಿ ಯೋಜನೆಗೆ ನೀಡಿರುವ ಮೊತ್ತ ಈ ಹಿಂದಿಗಿಂತ ಶೇಕಡ 178ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

ಬೆಂಗಳೂರು ಸಬ್‌ ಅರ್ಬನ್‌ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಶೇ.20ರಷ್ಟು ಅನುದಾನ ನೀಡಲಿದೆ, ಈಗಾಗಲೇ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದರು.

ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ ಕೇಂದ್ರ ಸರಕಾರ ಶೇ.20 ಹಾಗೂ ರಾಜ್ಯ ಸರಕಾರ ಶೇ. 20 ವೆಚ್ಚ ವಭರಿಸುತ್ತವೆ. ಉಳಿದ ಶೇ.60ರಷ್ಟನ್ನು ಹೊರ ಸಾಲದ ಮೂಲಕ ಹೊಂದಾಣಿಕೆ ಮಾಡಲಾಗುತ್ತದೆ. ಅದಕ್ಕೂ ಕೂಡ ಗ್ಯಾರಂಟಿ ಕೊಡಲು ಕೇಂದ್ರ ಸರಕಾರ ಸಿದ್ದವಿದೆ ಎಂದರು.

ಮಾರ್ಚ್ 31 ರಂದು ಲೋಕಸಭೆಯಲ್ಲಿ ಅನುಮೋದನೆಗೊಂಡ ಬಳಿಕ ಕೇಂದ್ರ ಹಣಕಾಸು ಸಚಿವಾಲಯ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತದೆ. ನನ್ನ ಬಜೆಟ್ ನಲ್ಲಿ ಘೋಷಿತವಾಗಿರುವ ಯೋಜನೆ ಜಾರಿಯಾಗುವಂತೆ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು.

ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿಯಲ್ಲಿ ರಾಜ್ಯದ ಬಾಕಿ ಇರುವ ಪಾಲನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಹಣಕಾಸು ಸಚಿವರು ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಕೈಗಾರಿಕೆ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಿಗಳು ಪಾಲ್ಗೊಂಡಿದ್ದರು.