- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿವಿಧ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

dalita-sangharsha [1]

ಮಡಿಕೇರಿ : ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್-1978-79) ತಿದ್ದುಪಡಿ ತರಬೇಕು ಮತ್ತು ನ್ಯಾಯಾಧೀಶರಾದ ಎ.ಜೆ.ಸದಾಶಿವ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರ್ಗೀಕರಣ ವರದಿಯನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಈ ಸಂದರ್ಭ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಮಾತನಾಡಿ, ಪಿಟಿಸಿಎಲ್ ಕಾಯ್ದೆಗೆ ಯಾವುದೇ ದಕ್ಕೆಯಾಗದಂತೆ ಸೂಕ್ತ ತಿದ್ದುಪಡಿ ತರಬೇಕು, ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಬಜೆಟ್ ಅಧಿವೇಶನದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳು
ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಇರುವ ಮೀಸಲಾತಿಯನ್ನು ಅದರೊಳಗಿನ ಉಪ ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲು ಪ್ರತ್ಯೇಕ ಆಯೋಗವನ್ನು ರಚನೆ ಮಾಡಬೇಕು, ಬಗರ್‌ಹುಕ್ಕುಂ ಸಕ್ರಮೀಕರಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅರ್ಜಿಗಳು ವಜಾಗೊಂಡಿರುವುದನ್ನು ಪುನರ್ ಪರಿಶೀಲಿಸಲು ಆದೇಶ ಹೊರಡಿಸಬೇಕು, ಶೇ. 50 ರಷ್ಟು ಭೂಮಿ ಮೀಸಲಿಡಲು ಭೂ ಮಿತಿಶಾಸನ ಜಾರಿಗೆ ತರಬೇಕು, ದಲಿತರಿಗೆ ನಿಯಮಾನುಸಾರ ಭೂ ನೀಡಬೇಕು, ಪ.ಜಾ, ಪ.ಪಂ ಕ್ಕೆ ಮೀಸಲಿಟ್ಟ ಹಣ ವಿನಿಯೋಗವಾಗುತ್ತಿರುವುದರಿಂದ ಇದಕ್ಕಾಗಿ ಕಠಿಣ ನಿಯಮಗಳನ್ನು ರೂಪಿಸಬೇಕು, ದಲಿತ ಗುತ್ತಿಗೆದಾರರಿಗೆ ಯಾವುದೇ ಮಿತಿ ಹಾಕದೇ ಟೆಂಡರ್‌ಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು, ಸರ್ಕಾರದ ಸ್ವಾಮ್ಯದ ಇಲಾಖೆಗಳನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಮತ್ತು ಈಗಿರುವ ಖಾಸಗೀ ಕ್ಷೇತ್ರದಲ್ಲಿ ಖಡ್ಡಾಯವಾಗಿ ಮೀಡಲಾತಿಯನ್ನು ಜಾರಿಗೆ ತರಬೇಕು, ಎಲ್ಲಾ ಇಲಾಖೆಗಳಲ್ಲಿ ಸರ್ಕಾರ ನೀಡುತ್ತಿರುವ ಹೊರಗುತ್ತಿಗೆ ಪದ್ದತಿಯನ್ನು ಕೂಡಲೇ ರದ್ದುಗೊಳಿಸಬೇಕು, ಪ.ಜಾ, ಪ.ಪಂ. ಬ್ಯಾಕ್‌ಲಾಕ್ ಹುದ್ದೆಗಳನ್ನು ಭರ್ತಿಮಾಡಬೇಕು, ಪ.ಜಾ. ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸೌಲಭ್ಯ ವಿತರಿಸಲು ಸ್ಥಳೀಯ ಶಾಸಕರ ಶಿಫಾರಸ್ಸು ಪಡೆಯಬೇಕೆಂದಿರುವ ಆದೇಶವನ್ನು ವಾಪಾಸ್ಸು ಪಡೆಯಬೇಕು, ಜಿಲ್ಲೆಗೆ ಒಬ್ಬ ಪ್ರತ್ಯೇಕ ನೊಡೆಲ್ ಅಧಿಕಾರಿಯನ್ನು ನೇಮಿಸಬೇಕು, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಬೇಕು, ಖಾಲಿ ಇರುವ ಹಾಸ್ಟೇಲ್ ವಾರ್ಡನ್ ಹುದ್ದೆಗಳಿಗೆ ನೇಮಕಾತಿ ಮಾಡಬೇಕು, ಹೋರಾಟ ಸಂದರ್ಭ ರಾಜ್ಯಾದ್ಯಂತ ಕ.ದ.ಸಂ.ಸ ಪದಾಧಿಕಾರಿಳಿಗೆ ಹಾಕಿರುವ ಕ್ರಿಮಿನಲ್ ಕೇಸ್‌ಗಳನ್ನು ವಾಪಾಸ್ಸು ಪಡೆದು ರೌಡಿಶೀಟರ್ ಪಟ್ಟಿಯಿಂದ ಹೆಸರನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಸಮಿತಿಯ ಪ್ರಮುಖರಾದ ರಾಮ್‌ದಾಸ್, ರಮೇಶ್, ಶುಭ, ಜ್ಯೋತಿ ರಾಘವೇಂದ್ರ, ರಾಘು, ಮುದ್ದುರಾಜು, ಜಾನಕಿ, ಭಾಗ್ಯಶ್ರೀ, ಗಣೇಶ್ ಮತ್ತಿತರ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.