ಇಸ್ಲಾಮಾಬಾದ್: ಇಸ್ಲಾಂಗೆ ಮತಾಂತರಗೊಂಡು , ದೇಶದ ಸಿಂಧ್ ಪ್ರಾಂತ್ಯದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಅಪ್ರಾಪ್ತ ಹಿಂದೂ ಹುಡುಗಿಯ ಮದುವೆಯನ್ನು ಪಾಕಿಸ್ತಾನ ನ್ಯಾಯಾಲಯವು ರದ್ದುಪಡಿಸಿದೆ.
ಒಂಬತ್ತನೇ ತರಗತಿಯಯಲ್ಲಿ ಓದುತಿದ್ದ ವಿದ್ಯಾರ್ಥಿನಿಯನ್ನು ಕಳೆದ ಜನವರಿ 15 ರಂದು ಜಾಕೋಬಾದ್ ಜಿಲ್ಲೆಯಿಂದ ಅಲಿ ರಾಜಾ ಸೋಲಂಗಿ ಎಂಬಾತ ಅಪಹರಿಸಿ, ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆಕೆಯ ತಂದೆ ಎಫ್‌ಐಆರ್ ದಾಖಲಿಸಿದ್ದಾರೆ. ಅಪಹರಣಕ್ಕೊಳಗಾದಾಗ ಮಗಳಿಗೆ 15 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಗುಲಾಮ್ ಅಲಿ ಖಸ್ರೊ ಅವರು ತೀರ್ಪು ನೀಡಿ ಯುವತಿಯು ಅಪ್ರಾಪ್ತೆ ಆಗಿರುವುದರಿಂದ ವಿವಾಹವು ಸಿಂಧುವಲ್ಲ ಎಂದು ತೀರ್ಪಿತ್ತಿದ್ದಾರೆ. ಸೋಲಂಗಿಯನ್ನು ಮದುವೆಯಾಗಲು ಯುವತಿಯು ಇಸ್ಲಾಂ ಗೆ ಮತಾಂತರವಾಗಿ ಅಲಿಜ ಎಂದು ಹೆಸರನ್ನಿಟ್ಟುಕೊಂಡಿದ್ದಳು ಎಂದು ಹೇಳಲಾಗಿತ್ತು.
ಅಪಹರಣಕಾರ ಸೋಲಂಗಿಯು ಯುವತಿಯು ಸ್ವ ಇಚ್ಚೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ವಾದಿಸಿದ್ದ.
ಸಾಕ್ಷಿ ಮತ್ತು ದಾಖಲೆಗಳನ್ನು ಉಲ್ಲೇಖಿಸಿ ನ್ಯಾಯಾಧೀಶರು ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದು ಮತ್ತು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಪ್ರಕಾರ ಮದುವೆಗೆ ಸೂಕ್ತವಲ್ಲ ಎಂದು ತೀರ್ಪು ನೀಡಿದರು.
ಬಾಲ್ಯ ವಿವಾಹವನ್ನು ನಡೆಸಲು, ಸುಗಮಗೊಳಿಸಲು ಮತ್ತು ಸಹಾಯ ಮಾಡಲು ತೊಡಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಲರ್ಕಾನಾದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲಾರ್ಕಾನಾದ ಮಹಿಳಾ ಆಶ್ರಯ ಮನೆಯಿಂದ ಬಾಲಕಿಯನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಟ್ಟಣದಲ್ಲಿ ಜಮಾವಣೆಗೊಂಡಿದ್ದುದರಿಂದ ವಿಚಾರಣೆ ನ್ಯಾಯಾಲಯದಲ್ಲಿ ಮತ್ತು ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ.
ಪಾಕಿಸ್ತಾನದ ಹಿಂದೂಗಳು ಬಹುಪಾಲು ವಾಸಿಸುವ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರ ಅಪಹರಣ ಮತ್ತು ಮತಾಂತರ ಪ್ರಮುಖ ವಿಷಯವಾಗಿದೆ. ಪ್ರತೀ ವರ್ಷವೂ ಸಾವಿರಾರು ಹಿಂದೂ ಹಾಗೂ ಕ್ರಿಶ್ಚಿಯನ್ ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮುಸ್ಲಿಂ ಯುವಕರ ಜತೆಗೆ ಮದುವೆ ಮಾಡಿಸಲಾಗುತ್ತಿದೆ. ಈ ಕುರಿತು ಅಲ್ಲಿನ ಪೋಲೀಸರಾಗಲೀ , ನ್ಯಾಯಾಲಯಗಳಾಗಲೀ ಅಲ್ಪ ಸಂಖ್ಯಾತ ಸಮುದಾಯದವರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಕಳೆದ ತಿಂಗಳಷ್ಟೆ ೯ ನೇ ತರಗತಿ ಓದುತಿದ್ದ ಕ್ರಿಶ್ಚಿಯನ್ ಅಪ್ರಾಪ್ತ ಬಾಲಕಿಯ ಅಪಹರಣ ಹಾಗೂ ಬಲವಂತದ ಮದುವೆ ಕುರಿತು ತೀರ್ಪು ನೀಡಿದ್ದ ಪಾಕಿಸ್ಥಾನದ ಹೈ ಕೋರ್ಟ್ ಷರಿಯ ಕಾನೂನಿನ ಪ್ರಕಾರ ಮೈ ನೆರೆದ ಯುವತಿಯರು ಮದುವೆ ಹಾಗೂ ಮತಾಂತರಕ್ಕೆ ಅರ್ಹರು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ದ ಮಾನವ ಹಕ್ಕು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದವು.
Click this button or press Ctrl+G to toggle between Kannada and English