- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಟಿ20 ವಿಶ್ವಕಪ್​ : ಸೆಮಿಫೈನಲ್​ಗೇರಿದ ಭಾರತದ ಮಹಿಳೆಯರು

t-20 [1]

ಮೆಲ್ಬೋರ್ನ್ : ಹದಿಹರೆಯದ ಸ್ಪೋಟಕ ಬ್ಯಾಟುಗಾರ್ತಿ ಶೆಫಾಲಿ ವರ್ಮ (46 ರನ್, 34 ಎಸೆತ, 4 ಬೌಂಡರಿ, 3 ಸಿಕ್ಸರ್) ತೋರಿದ ಮತ್ತೊಂದು ಕೆಚ್ಚೆದೆಯ ನಿರ್ವಹಣೆಯ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.

ಜಂಕ್ಷನ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಮಾಜಿ ರನ್ನರ್ಅಪ್ ನ್ಯೂಜಿಲೆಂಡ್ ವಿರುದ್ಧ 3 ರನ್ಗಳಿಂದ ರೋಚಕ ಗೆಲುವು ದಾಖಲಿಸಿ ಫೇವರಿಟ್ ತಂಡವಾಗಿ ಮುನ್ನಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಮಧ್ಯಮ ಕ್ರಮಾಂಕದ ಕುಸಿತದ ನಡುವೆಯೂ 8 ವಿಕೆಟ್ಗೆ 133 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ, ಭಾರತದ ಸಂಘಟಿತ ಬೌಲಿಂಗ್ ದಾಳಿ ಎದುರು ನಲುಗಿ 6 ವಿಕೆಟ್ಗೆ 130 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಎ ಗುಂಪಿನ ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಹರ್ವನ್ಪ್ರೀತ್ ಕೌರ್ ಬಳಗ ಟೂರ್ನಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡ ಮೊದಲ ತಂಡವೆನಿಸಿದೆ. 16 ವರ್ಷದ ಆಟಗಾರ್ತಿ ಶೆಫಾಲಿ ವರ್ಮ ಸತತ 2ನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ದೀಪ್ತಿ ಶರ್ಮ ಎಸೆದ ಇನಿಂಗ್ಸ್ನ ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ್ತಿ ರಾಚೆಲ್ ಪ್ರೀಸ್ಟ್ 12 ರನ್ ಕಸಿದರು. ಅದರ ಬೆನ್ನಲ್ಲೇ ತಿರುಗೇಟು ನೀಡುವಲ್ಲಿ ಭಾರತ ಸಫಲವಾಯಿತು. ಇನಿಂಗ್ಸ್ನ 2ನೇ ಓವರ್ನಲ್ಲಿ ಶಿಖಾ ಪಾಂಡೆಗೆ ಪ್ರೀಸ್ಟ್ (12) ವಿಕೆಟ್ ಒಪ್ಪಿಸಿದರು. ನಾಯಕಿ ಸೋಫಿ ಡಿವೈನ್ (14) ಮತ್ತು ಅನುಭವಿ ಆಟಗಾರ್ತಿ ಸುಜಿ ಬೇಟ್ಸ್ (6) ಎಚ್ಚರಿಕೆಯ ಆಟವಾಡಲು ಯತ್ನಿಸಿದರು. 24 ಎಸೆತಗಳಲ್ಲಿ 17 ರನ್ ಸೇರಿಸಿದ ಇವರಿಬ್ಬರನ್ನು ಪೂನಂ ಮತ್ತು ದೀಪ್ತಿ ಶರ್ಮ ಡಗ್ಔಟ್ಗೆ ಅಟ್ಟಿ ಭಾರತಕ್ಕೆ ಸ್ಪಷ್ಟ ಮೇಲುಗೈ ತಂದರು. ನಂತರ ಮ್ಯಾಡಿ ಗ್ರೀನ್ (24) ಮತ್ತು ಕೇಥಿ ಮಾರ್ಟಿನ್ (25) ಕೆಲಕಾಲ ಪ್ರತಿರೋಧ ತೋರಿದರು.

ಒಂದು ಹಂತದಲ್ಲಿ 90 ರನ್ಗೆ 5 ವಿಕೆಟ್ ಕಳೆದುಕೊಂಡು ಕಿವೀಸ್ ಹೀನಾಯ ಸೋಲಿನ ಹಾದಿಯಲ್ಲಿತ್ತು. ಆಗ ಅಮಿಲಿಯಾ ಕೆರ್› (34*) ತೋರಿದ ಪ್ರತಿಹೋರಾಟದಿಂದ ಕಿವೀಸ್ ಗೆಲುವಿನ ಸನಿಹ ಬಂದಿತು. ಕೊನೇ 2 ಓವರ್ಗಳಲ್ಲಿ 34 ರನ್ ಬೇಕಿದ್ದಾಗ, ಪೂನಂ ಯಾದವ್ ಎಸೆದ ಇನಿಂಗ್ಸ್ನ 19ನೇ ಓವರ್ನಲ್ಲಿ ಕೆರ್› ಸ್ಕೂಪ್ ಶಾಟ್ಗಳಿಂದಲೇ 4 ಬೌಂಡರಿ ಸಹಿತ 18 ರನ್ ಕಸಿದರು. ಇದರಿಂದ ಕೊನೇ ಓವರ್ನಲ್ಲಿ 16 ರನ್ ಅಗತ್ಯವಿತ್ತು. ಆಗ ದಾಳಿಗಿಳಿದ ಅನುಭವಿ ವೇಗಿ ಶಿಖಾ ಪಾಂಡೆ 12 ರನ್ಗಳನ್ನಷ್ಟೇ ಬಿಟ್ಟುಕೊಟ್ಟು ರೋಚಕ ಗೆಲುವು ತಂದರು.

ಭಾರತ ತಂಡ ಮಹಿಳೆ ಯರ ಟಿ20 ವಿಶ್ವಕಪ್ನಲ್ಲಿ 4ನೇ ಬಾರಿ ಸೆಮಿಫೈನಲ್ಗೇರಿದ ಸಾಧನೆ ಮಾಡಿದೆ. ಹಿಂದೆ 2009, 2010 ಮತ್ತು 2018ರಲ್ಲಿ ಈ ಸಾಧನೆ ಮಾಡಿದ್ದ ಭಾರತ, 3 ಬಾರಿಯೂ ಸೆಮೀಸ್ನಲ್ಲೇ ಎಡವಿತ್ತು.

ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವಿಗೆ ನೆರವಾಗಿದ್ದ ಬಿರುಸಿನ ಬ್ಯಾಟಿಂಗ್ ನಿರ್ವಹಣೆಯನ್ನೇ ಶೆಫಾಲಿ ವರ್ಮ ಪುನರಾವರ್ತಿಸಿದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (11) ರನ್ಬರ ಮುಂದುವರಿಸಿದರು. ಆಗ ಶೆಫಾಲಿ ಅವರನ್ನು ಕೂಡಿಕೊಂಡ ವಿಕೆಟ್ ಕೀಪರ್-ಬ್ಯಾಟುಗಾರ್ತಿ ತಾನಿಯಾ ಭಾಟಿಯಾ (23) 2ನೇ ವಿಕೆಟ್ಗೆ ಉಪಯುಕ್ತ 51 ರನ್ ಜತೆಯಾಟವಾಡಿದರು. ಸ್ಪಿನ್ನರ್ ಆನ್ನಾ ಪೀಟರ್ಸನ್ ಓವರ್ನಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಶೆಫಾಲಿಗೆ ಕಿವೀಸ್ ಫೀಲ್ಡರ್ಗಳಿಂದ ಕೆಲ ಜೀವದಾನಗಳೂ ಲಭಿಸಿದವು. 10ನೇ ಓವರ್ನಲ್ಲಿ ತಾನಿಯಾ ಔಟಾದ ಬಳಿಕ ಭಾರತ ಮಧ್ಯಮ ಕ್ರಮಾಂಕದಲ್ಲಿ ಕುಸಿತ ಕಂಡಿತು. ಜೆಮೀಮಾ ರೋಡ್ರಿಗಸ್ (10), ನಾಯಕಿ ಹರ್ವನ್ಪ್ರೀತ್ ಕೌರ್ (1), ದೀಪ್ತಿ ಶರ್ಮ (8), ವೇದಾ ಕೃಷ್ಣಮೂರ್ತಿ (6) ಬೇಗನೆ ಔಟಾದರು. ಈ ನಡುವೆ ಶೆಫಾಲಿ ಅರ್ಧಶತಕದಂಚಿನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಕೆರ್ರ್ಗೆ ವಿಕೆಟ್ ಒಪ್ಪಿಸಿದರು. 1 ವಿಕೆಟ್ಗೆ 68 ರನ್ ಗಳಿಸಿದ್ದ ಭಾರತ, 43 ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ಶಿಖಾ ಪಾಂಡೆ (10*) ಮತ್ತು ರಾಧಾ ಯಾದವ್ (14) ಮೊತ್ತವನ್ನು 130ರ ಗಡಿ ದಾಟಿಸಿದರು.

02 ಶೆಫಾಲಿ ವರ್ಮ ಐಸಿಸಿ ಟೂರ್ನಿಗಳಲ್ಲಿ 20 ವರ್ಷ ದಾಟುವ ಮೊದಲೇ 2 ಬಾರಿ ಪಂದ್ಯಶ್ರೇಷ್ಠ ಪಡೆದ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದರು.