- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತಾಲಿಬಾನಿಗಳ ಬಿಡುಗಡೆಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ನಕಾರ

kabul [1]

ಕಾಬೂಲ್ : ಅಫ್ಘಾನಿಸ್ತಾನ ಸರ್ಕಾರದ ಬಂಧನದಲ್ಲಿರುವ ಐದು ಸಾವಿರ ತಾಲಿಬಾನಿಗಳನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ತಿರಸ್ಕರಿಸಿದ್ದಾರೆ.

ಅಫ್ಘನ್ ಸರ್ಕಾರ ಮತ್ತು ಜನರೊಂದಿಗೆ ಮಾತುಕತೆ ನಡೆಸಬೇಕಾದರೆ ತನ್ನವರನ್ನು ಬಿಡುಗಡೆ ಮಾಡಬೇಕೆಂಬುದು ತಾಲಿಬಾನ್ ಷರತ್ತಾಗಿದೆ. ಆದರೆ, ಈ ಒತ್ತಾಯಕ್ಕೆ ಸೊಪ್ಪು ಹಾಕದಿರಲು ಸರ್ಕಾರ ನಿರ್ಧರಿಸಿರುವುದರಿಂದ ಶನಿವಾರವಷ್ಟೆ ಸಹಿ ಹಾಕಲಾಗಿರುವ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಜೈಲಿನಲ್ಲಿರುವ ತಾಲಿಬಾನಿಗಳ ಬಿಡುಗಡೆಗೆ ಪ್ರತಿಯಾಗಿ ತಾಲಿಬಾನ್ ವಶದಲ್ಲಿರುವ ಅಫ್ಘನ್ ಸರ್ಕಾರದ ಸುಮಾರು 1 ಸಾವಿರ ಬಂಧಿಗಳನ್ನು ಬಿಡುಗಡೆ ಮಾಡಲಾಗುವುದೆಂದು ಒಪ್ಪಂದದಲ್ಲಿ ಹೇಳಲಾಗಿದೆ. ಆದರೆ, ಅಧ್ಯಕ್ಷ ಘನಿ ತಾಲಿಬಾನಿಗಳ ಬಿಡುಗಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಇದನ್ನು ನಿರ್ಧರಿಸುವ ಹಕ್ಕು ಅಮೆರಿಕಕ್ಕಿಲ್ಲ. ಅದು ಏನಿದ್ದರೂ ಮಧ್ಯವರ್ತಿ ಅಷ್ಟೆ’ ಎಂದು ಘನಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

18 ವರ್ಷಗಳ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಕತಾರ್ನಲ್ಲಿ ತಾಲಿಬಾನ್ಗಳ ಜತೆ ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಕತಾರ್ನಲ್ಲಿನ ಭಾರತದ ರಾಯಭಾರಿ ಪಿ. ಕುಮಾರನ್ ವೀಕ್ಷಕರಾಗಿ ಭಾಗವಹಿಸಿ ಅದಕ್ಕೆ ಸಾಕ್ಷಿಯಾಗಿದ್ದರು. ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಉಪಸ್ಥಿತರಿದ್ದರು.