- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೈಸೂರು : ಅಧ್ಯಾಪಕಿಯಿಂದ ಹಲ್ಲೆ ಆರೋಪ; ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದ ಎಂಐಟಿ ವಿದ್ಯಾರ್ಥಿಗಳು

mysuru [1]

ಮೈಸೂರು : ಮೈಸೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಮೇಲೆ ಅಧ್ಯಾಪಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ತಾಂಡವಪುರ ಬಳಿಯ ಎಂಐಟಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಅಧ್ಯಾಪಕಿ ಮೇಲೆ ಕ್ರಮ ಕೈಗೊಳ್ಳುವಂತೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ತಾಂಡವಪುರದ ಬಳಿಯ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕ್ರೀಡಾಕೂಟದ ವೇಳೆ ವಿದ್ಯಾರ್ಥಿಗಳು ಹಾಗು ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯರ ಮೇಲೆ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕಿ ರಂಜಿತಾ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಇನ್ನು, ವಿದ್ಯಾರ್ಥಿಗಳ ಪರ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗೇಂದ್ರ ಪ್ರಸಾದ್ ಸಹ ಮಾತನಾಡಿದ್ದು, ಹೀಗೆ ಗಲಾಟೆಯ ವೇಳೆ ರಂಜಿತಾ ಪತಿ ಚೇತನ್‌ ನನಗೆ ಕಪಾಳ ಮೋಕ್ಷ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.

ರಂಜಿತಾ ಪತಿ ಚೇತನ್‌ ಕಾಲೇಜಿನ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ. ವಿಭಾಗದ ಮುಖ್ಯಸ್ಥರ ಮೇಲಿನ ಹಲ್ಲೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಬಗ್ಗೆ ನಾಗೇಂದ್ರ ಪ್ರಸಾದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿದರು.

ಹಲ್ಲೆ ಮಾಡಿದ ದೃಶ್ಯವನ್ನು ಸಿಸಿ ಕ್ಯಾಮರಾದಿಂದ ಕಾಲೇಜು ಆಡಳಿತ ಮಂಡಳಿ ಡಿಲೀಟ್ ಮಾಡಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಎಂಐಟಿ ಇಂಜಿನಿಯರಿಂಗ್‌ ಕಾಲೇಜಿಗೆ ರಜೆ ಘೋಷಿಸಲಾಗಿದೆ.