ಐಪಿಎಲ್‌ ಬಹುಮಾನ ಮೊತ್ತ ಅರ್ಧರಷ್ಟು ಕುಸಿತ : ಕಾರಣ ಕೊಟ್ಟ ಬಿಸಿಸಿಐ

2:55 PM, Wednesday, March 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

IPL

ಮುಂಬೈ : ಭಾರತದ ಆರ್ಥಿಕ ಹಿಂಜರಿತದ ಬಿಸಿ ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೂ (ಬಿಸಿಸಿಐ) ತಟ್ಟಿದಂತಿದ್ದು, ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಾಕ್‌ಔಟ್‌ ಹಂತ ತಲುಪಿದ ತಂಡಗಳಿಗೆ ನೀಡಲಾಗುವ ಬಹುಮಾನ ಮೊತ್ತದಲ್ಲಿ ಶೇ. 50 ರಷ್ಟನ್ನು ಕಡಿಮೆ ಮಾಡಲು ಮುಂದಾಗಿದೆ. 2008ರಲ್ಲಿ ಶುರುವಾದ ಐಪಿಎಲ್‌ ಟೂರ್ನಿಯು ಜಗತ್ತಿನ ಉಳಿದೆಲ್ಲಾ ಟಿ20 ಲೀಗ್‌ಗಳಿಗೆ ಹೋಲಿಸಿದರೆ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಹಣದ ಹೊಳೆಯನ್ನೇ ಹರಿಸಿದೆ. ಆದರೆ, ಇದೇ ಮೊದಲ ಬಾರಿ ಐಪಿಎಲ್‌ ಟೂರ್ನಿಯ ಬಹುಮಾನ ಮೊತ್ತಕ್ಕೆ ಕತ್ತರಿ ಹಾಕುವ ಪರಿಸ್ಥಿತಿ ಬಿಸಿಸಿಐನಲ್ಲಿ ನಿರ್ಮಾಣವಾಗಿದೆ.ಈ ಬಗ್ಗೆ ಐಪಿಎಲ್‌ನ ಎಲ್ಲಾ ಸ್ಟೇಕ್‌ ಹೋಲ್ಡರ್‌ಗಳಿಗೆ ಮತ್ತು 8 ಫ್ರಾಂಚೈಸಿ ತಂಡಗಳಿಗೆ ಬಿಸಿಸಿಐ ಸುತ್ತೋಲೆ ಹೊರಡಿಸಿದೆ. ಇನ್ನು 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಉದ್ಘಾಟನಾ ಸಮಾರಂಭವನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಜೊತೆಗೆ ಪ್ಲೇಆಫ್ಸ್‌ ತಂಡಗಳ ಬಹುಮಾನ ಮೊತ್ತವನ್ನು ಅರ್ಧದಷ್ಟು ಕಡಿಮೆ ಮಾಡುವುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಬಿಸಿಸಿಐ ಹೊರಡಿಸಿರುವ ಸುತ್ತೋಲೆ ಪ್ರಕಾರ 2020ರ ಐಪಿಎಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಒಟ್ಟು 10 ಕೋಟಿ ರೂ. ಬಹುಮಾನ ಪಡೆಯಲಿದೆ. ಅಂತಯೇ ರನ್ನರ್ಸ್‌ಅಪ್‌ ತಂಡವು 6.25 ಕೋಟಿ ರೂ. ಸ್ವೀಕರಿಸಲಿದ್ದು, ಪ್ಲೇಆಫ್ಸ್‌ನ ಎಲಿಮಿನೇಟರ್‌ ಮತ್ತು ಕ್ವಾಲಿಫೈಯರ್‌ ಪಂದ್ಯಗಳಲ್ಲಿ ಸೋತು 3ನೇ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಗಳು ಒಟ್ಟು 4.375 ಕೋಟಿ ರೂ ಬಹುಮಾನ ಪಡೆಯಲಿವೆ ಎಂದು ಬಿಸಿಸಿಐ ಹೇಳಿದೆ. ಆದರೆ, ಈ ಬಗ್ಗೆ ಫ್ರಾಂಚೈಸಿ ತಂಡಗಳು ಅಸಮಾಧಾನ ಹೊರಹಾಕಿದ್ದು ಚರ್ಚೆಗೆ ಮುಂದಾಗಿವೆ.

2019ರ ಚಾಂಪಿಯನ್ಸ್‌ ತಂಡ ಬರೋಬ್ಬರಿ 20 ಕೋಟಿ ರೂ. ಜೇಬಿಗಳಿಸಿತ್ತು. ರನ್ನರ್ಸ್‌ಅಪ್‌ ತಂಡಕ್ಕೆ 10 ಕೋಟಿ ರೂ. ಲಭ್ಯವಾಗಿ, 3ನೇ ಮತ್ತು 4ನೇ ಸ್ಥಾನ ಪಡೆದ ತಂಡಗಳು ಕ್ರಮವಾಗಿ 8.75 ಕೋಟಿ ರೂ. ಸ್ವೀಕರಿಸಿದ್ದವು. ಇದೇ ವೇಳೆ ನಾಲ್ಕು ಫ್ರಾಂಚೈಸಿಗಳು ಬಹುಮಾನ ಮೊತ್ತ ಕಡಿಮೆ ಮಾಡಿರುವುದಕ್ಕೆ ಅಸಮಾಧಾನ ಹೊಂದಿದ್ದು, ಈ ಬಗ್ಗೆ ಆಡಳಿತ ಮಂಡಳಿಯೊಂದಿಗೆ ಚರ್ಚೆ ಮಾಡುವುದಾಗಿ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿವೆ.

ಒಂದೆಡೆ ಬಹುಮಾನ ಮೊತ್ತದಲ್ಲಿ ಭಾರಿ ಇಳಿಕೆ ಮಾಡಿರುವ ಬಿಸಿಸಿಐ, ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸುವ ಕ್ರೀಡಾಂಗಣ ಸಲುವಾಗಿ ಆಯಾ ಕ್ರಿಕೆಟ್‌ ಸಂಸ್ಥೆಗಳಿಗೆ ಫ್ರಾಂಚೈಸಿಗಳು ಹೆಚ್ಚುವರಿ 20 ಲಕ್ಷ ರೂ. ಶುಲ್ಕ ಪಾವತಿಸಬೇಕು ಎಂದು ಬಿಸಿಸಿಐ ಆದೇಶಿಸಿದೆ. ಈ ಹಿಂದಿನ ಆವೃತ್ತಿಗಳಲ್ಲಿ ಫ್ರಾಂಚೈಸಿ ತಂಡಗಳು ಪ್ರತಿ ಪಂದ್ಯಕ್ಕೆ ಆಯಾ ಕ್ರಿಕೆಟ್‌ ಸಂಸ್ಥೆಗಳಿಗೆ 30 ಲಕ್ಷ ರೂ.ಶುಲ್ಕ ಪಾವತಿಸುತ್ತಿದ್ದವು. ಇದೇ ಒಪ್ಪಂದದ ಅಡಿಯಲ್ಲಿ ಬಿಸಿಸಿಐ ಕೂಡ ಆಯಾ ಕ್ರೀಡಾಂಗಣದ ಕ್ರಿಕೆಟ್‌ ಸಂಸ್ಥೆಗಳಿಗೆ 50 ಲಕ್ಷ ರೂ. ನೀಡಲಿದೆ. ಈ ಮೂಲಕ ಪಂದ್ಯವೊಂದಕ್ಕೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳು 1 ಕೋಟಿ ರೂ. ಸ್ವೀಕರಿಸಲಿವೆ.

2019ರ ಐಪಿಎಲ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೇ ಇರುವ ಭಾರತೀಯ ಆಟಗಾರರನ್ನು ಟೂರ್ನಿ ಮಧ್ಯದಲ್ಲಿ ಫ್ರಾಂಚೈಸಿ ತಂಡಗಳು ವಿನಿಮಯ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಈಗ ಭಾರತವನ್ನು ಪ್ರತಿನಿಧಿಸಿರುವ ಹಾಗೂ ವಿದೇಶಿ ಆಟಗಾರರನ್ನು ಕೂಡ ವಿನಿಮಯ ನಿಯಮದಡಿ ತರಲಾಗಿದೆ. ಅಂದಹಾಗೆ ಈ ನಿಯಮ ಟೂರ್ನಿಯಲ್ಲಿ ಅರ್ಧದಶಷ್ಟು ಅಂದರೆ 28 ಪಂದ್ಯಗಳು ಮುಗಿದ ಬಳಿಕವಷ್ಟೇ ಜಾರಿಗೆ ಬರಲಿದೆ.

ಇದರರ್ಥ ಟೂರ್ನಿಯ ಅರ್ಧದ ಹೊತ್ತಿಗೆ ಯಾವುದೇ ಫ್ರಾಂಚೈಸಿ ತಂಡದಲ್ಲಿ ಕನಿಷ್ಠ ಎರಡಕ್ಕಿಂತಲೂ ಕಡಿಮೆ ಪಂದ್ಯಗಳನ್ನಾಡಿ ಉಳಿದುಕೊಂಡಿರುವ ಆಟಗಾರರನ್ನು ಬೇರೆ ಫ್ರೇಂಚೈಸಿಗಳು ಸಾಲದ ರೂಪದಲ್ಲಿ ಪಡೆದು ತಮ್ಮ ತಂಡದಲ್ಲಿ ಬಳಸಿಕೊಳ್ಳಬಹುದಾಗಿದೆ. ಈ ಆಟಗಾರನಿಗೆ ಬೇರೆ ಫ್ರಾಂಚೈಸಿ ನೀಡುವ ಮೊತ್ತವನ್ನು ಆಟಗಾರನನ್ನು ಒದಗಿಸಿಕೊಟ್ಟ ಫ್ರಾಂಚೈಸಿ ಪಡೆದುಕೊಳ್ಳಲಿದೆ.

ಐಪಿಎಲ್‌ನಲ್ಲಿ ಇನ್ಮುಂದೆ ನೋಬಾಲ್‌ ಸಮಸ್ಯೆ ತಲೆದೂರುವುದಿಲ್ಲ. ಕಳೆದ ಬಾರಿ ಆನ್‌ಫೀಲ್ಡ್‌ ಅಂಪೈರ್‌ಗಳು ಬೌಲರ್‌ಗಳು ಗೆರೆದಾಟಿ ಚೆಂಡನ್ನು ಎಸೆಯುತ್ತಿರುವುದನ್ನು ಗಮನಿಸುವಲ್ಲಿ ಹಲವು ಬಾರಿ ವಿಫಲರಾಗಿದ್ದರು. ಈ ಸಮಸ್ಯೆಗೆ ಪರಿಹಾರ ತಂದಿರುವ ಬಿಸಿಸಿಐ ಐಪಿಎಲ್‌ 2020 ಟೂರ್ನಿಯಿಂದ ನೋಬಾಲ್‌ ಪರಿಶೀಲನೆಗೆ ಟಿವಿ ಅಂಪೈರ್‌ ನೇಮಕ ಮಾಡಲಿದೆ. ಥರ್ಡ್‌ ಅಂಪೈರ್‌ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.

ಇದೇ ವೇಳೆ ಬಿಸಿಸಿಐ ಅನಗತ್ಯ ವೆಚ್ಚ ತಗ್ಗಿಸಲು ಮುಂದಾಗಿದ್ದು ಕನಿಷ್ಠ 8 ಗಂಟೆಗಿಂತಲೂ ಕಡಿಮೆ ಪ್ರಯಾಣ ಅವಧಿ ಇರುವಾಗ ಬಿಸಿಸಿಐನ ಅಧಿಕಾರಿಗಳು ಬಿಸಿನೆಸ್‌ ಕ್ಲಾಸ್‌ ಬದಲಿಗೆ ಎಕಾಮನಿ ವಿಭಾಗದಲ್ಲಿ ಪ್ರಯಾಣ ಮಾಡಬೇಕು ಎಂದು ಹೇಳಿದೆ. ಇದಕ್ಕೂ ಮುನ್ನ 3 ಗಂಟೆಗೂ ಅಧಿಕ ಕಾಲ ಪ್ರಯಾಣ ಅವಧಿ ಇದ್ದಲ್ಲಿ ಬಿಸಿನೆಸ್‌ ಕ್ಲಾಸ್‌ ಬಳಕೆ ಮಾಡಲಾಗುತ್ತಿತ್ತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English