- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

55 ಎಸೆತಗಳಲ್ಲಿ ಅಜೇಯ 158 ರನ್ : ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆ

hardhik-pande [1]

ಮುಂಬೈ : ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕ್ರೀಡಾಂಗಣಕ್ಕೆ ಕಮ್‍ಬ್ಯಾಕ್ ಮಾಡಿದ ಬಳಿಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಟೀಂ ಇಂಡಿಯಾ ತಂಡಕ್ಕೆ ತಮ್ಮನ್ನು ಆದಷ್ಟು ಬೇಗ ಆಯ್ಕೆ ಮಾಡುವಂತೆ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬಿರುಸಿನಿಂದ ಬ್ಯಾಟ್ ಬೀಸುತ್ತಿದ್ದಾರೆ.

ದೇಶೀಯ ಟೂರ್ನಿಯ ಡಿವೈ ಪಾಟೀಲ್ ಟಿ20 ಕಪ್ ಭಾಗವಾಗಿ ನಡೆಯುತ್ತಿರುವ ಪಂದ್ಯಗಳಲ್ಲಿ ಹಾರ್ದಿಕ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಬರೋಬ್ಬರಿ 20 ಸಿಕ್ಸರ್ ಸಿಡಿಸಿ ಮಿಂಚಿಸಿದ್ದಾರೆ. ಟೂರ್ನಿಯಲ್ಲಿ ರಿಲಯನ್ಸ್ 1 ತಂಡದ ಪರ ಆಡುತ್ತಿರುವ ಹಾರ್ದಿಕ್, ಕಳೆದ ಪಂದ್ಯಲ್ಲಿ ಕೇವಲ 39 ಎಸೆತಗಳಲ್ಲಿ ಶತಕ (105 ರನ್) ಸಿಡಿಸಿದ್ದರು. ಇಂದು ನಡೆದ ಪಂದ್ಯದಲ್ಲಿ 2ನೇ ಶತಕ ಸಿಡಿಸಿರುವ ಹಾರ್ದಿಕ್ ಪಾಂಡ್ಯ, 55 ಎಸೆತಗಳಲ್ಲಿ 20 ಸಿಕ್ಸರ್, 6 ಬೌಂಡರಿ ನೆರವಿನಿಂದ ಅಜೇಯ 158 ರನ್ ಗಳಿಸಿದ್ದಾರೆ.

ಭಾರತ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಸಾಧನೆಯನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ. ಭಾರತದ ಪರ ಟಿ20 ಮಾದರಿಯಲ್ಲಿ ಅತ್ಯಧಿಕ ಸ್ಕೋರ್ ದಾಖಲಿಸಿದ ಸಾಧನೆ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿತ್ತು. ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್ ಸಿ ಪಂದ್ಯದಲ್ಲಿ ಮುಂಬೈ ಪರ ಆಡಿದ್ದ ಅಯ್ಯರ್ ಸಿಕ್ಕಿಂ ವಿರುದ್ಧ 147 ರನ್ ಗಳಿಸಿದ್ದರು. ಸದ್ಯ ಅಯ್ಯರ್ ದಾಖಲೆಯನ್ನು ಹಾರ್ದಿಕ್ ಪಾಂಡ್ಯ ಬ್ರೇಕ್ ಮಾಡಿದ್ದಾರೆ.

ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಿಪಿಸಿಎಲ್ ತಂಡ ರಿಲಯನ್ಸ್ 1 ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ರಿಲಯನ್ಸ್ ತಂಡ ಹಾರ್ದಿಕ್‍ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡ 238 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಬಿಪಿಸಿಎಲ್ ತಂಡ 18.4 ಓವರ್ ಗಳಲ್ಲಿ 134 ರನ್ ಗಳಿಸಿ ಆಲೌಟ್ ಆಯ್ತು. ಬೌಲಿಂಗ್‍ನಲ್ಲೂ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 10 ಓವರ್ ಎಸೆದು 2 ವಿಕೆಟ್ ಪಡೆದರು. ಕಳೆದ ವಾರವಷ್ಟೇ ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್ ಮಾಡಿದ್ದರು. ಡಿವೈ ಪಾಟೀಲ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಭರ್ಜರಿ ಆಲ್‍ರೌಂಡರ್ ಪ್ರದರ್ಶನ ನೀಡಿ 25 ಎಸೆತಗಳಲ್ಲಿ 38 ರನ್ ಹಾಗೂ 3 ವಿಕೆಟ್ ಪಡೆದಿದ್ದರು.