- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ವಕಪ್ ಫೈನಲ್ ಆಡಿದ ಅತಿ ಕಿರಿಯ ಆಟಗಾರ್ತಿ : ಉಜ್ವಲ ಭವಿಷ್ಯ ಸಾರಿದ ಶಫಾಲಿ ವರ್ಮಾ

shifali [1]

ಮೆಲ್ಬೋರ್ನ್ : ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲಿಗೆ ಶರಣಾಗಿರಬಹುದು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದ ಫೈನಲ್ ಪಂದ್ಯದಲ್ಲಿ 85 ರನ್ ‌ಅಂತರದ ಭರ್ಜರಿ ಗೆಲುವು ಬಾರಿಸಿದ ಆತಿಥೇಯ ಆಸ್ಟ್ರೇಲಿಯಾ, ದಾಖಲೆಯ ಐದನೇ ವಿಶ್ವಕಪ್ ಕಿರೀಟ ಎತ್ತಿ ಹಿಡಿದಿತ್ತು. ಇದರೊಂದಿಗೆ ಭಾರತೀಯ ಮಹಿಳಾ ತಂಡದ ಚೊಚ್ಚಲ ಪ್ರಶಸ್ತಿ ಕನಸು ಭಗ್ನಗೊಂಡಿತ್ತು. ಆದರೂ ರನ್ನರ್ ಅಪ್ ಸಾಧನೆ ಮೆರೆಯುವ ಮೂಲಕ ದೊಡ್ಡ ಸಾಧನೆ ಮಾಡಿದೆ. ಈ ಮಧ್ಯೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ 16ರ ಹರೆಯದ ಶಫಾಲಿ ವರ್ಮಾ ಉಜ್ವಲ ಭವಿಷ್ಯವನ್ನು ಸಾರಿದ್ದಾರೆ.

ಪುರುಷ ಹಾಗೂ ಮಹಿಳಾ ಕ್ರಿಕೆಟ್ ಸೇರಿದಂತೆ ಐಸಿಸಿ ವಿಶ್ವಕಪ್ ಫೈನಲ್ ಆಡಿದ ಅತಿ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ 16ರ ಹರೆಯದ ಶಫಾಲಿ ವರ್ಮಾ ಭಾಜನವಾಗಿದ್ದಾರೆ. ಕಳೆದ ವರ್ಷದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶಫಾಲಿ ವರ್ಮಾ ಈ ಕಿರು ಅವಧಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯಲ್ಲಿ ಮಿಂಚಿನ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವಕಪ್ ಫೈನಲ್ ವೇಳೆಗೆ ಶಫಾಲಿ ವಯಸ್ಸು 16 ವರ್ಷ ಹಾಗೂ 40 ದಿನ ಮಾತ್ರವಾಗಿತ್ತು.

ಟೂರ್ನಿಯುದ್ಧಕ್ಕೂ ಪ್ರಭಾವಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಫಾಲಿ ವರ್ಮಾ ಫೈನಲ್‌ನಲ್ಲಿ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಮೆಗಾನ್ ಶಟ್ ಪ್ರಥಮ ಓವರ್‌ನ ಮೂರನೇ ಎಸೆತದಲ್ಲೇ ವಿಕೆಟ್ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದ್ದರು. ಪರಿಣಾಮ 185 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಭಾರತ ಸತತ ವಿಕೆಟ್‌ಗಳನ್ನು ಕಳೆದುಕೊಂಡು 19.1 ಓವರ್‌ಗಳಲ್ಲಿ 99 ರನ್‌ಗಳಿಗೆ ಸರ್ವಪತನವನ್ನು ಕಂಡಿತು.

ಸಚಿನ್ ತೆಂಡೂಲ್ಕರ್ ಮೆಚ್ಚಿನ ಆಟಗಾರನಾಗಿದ್ದರೂ ಬಾಲ್ಯದಿಂದಲೇ ಹುಡುಗರೊಂದಿಗೆ ಬೆರೆತು ಕ್ರಿಕೆಟ್ ಆಡುವ ಮೂಲಕ ವೀರೇಂದ್ರ ಸೆಹ್ವಾಗ್ ಶೈಲಿಯ ಕ್ರಿಕೆಟ್ ಮೈಗೂಡಿಸಿಕೊಂಡಿರುವ ಬಂದಿರುವ ಶಫಾಲಿ ಶರ್ಮಾರಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಬಾಕಿ ಉಳಿದಿದೆ. ಲೀಗ್ ಹಂತದಲ್ಲಿ ಅನುಭವಿ ಸ್ಮೃತಿ ಮಂಧಾನಾ ಜೊತೆ ಸೇರಿ ಬಿರುಸಿನ ಆರಂಭವೊದಗಿಸುವಲ್ಲಿ ಯಶಸ್ವಿಯಾಗಿದ್ದರು. ಉದ್ಘಾಟನಾ ಪಂದ್ಯದಲ್ಲೇ ಮಗಾನ್ ಶಟ್ ಓವರ್‌ವೊಂದರಲ್ಲಿ ನಾಲ್ಕು ಬೌಂಡರಿ ಸಿಡಿಸಿ ಅಬ್ಬರಿಸಿದ್ದರು. ಆದರೆ ಫೈನಲ್‌ನಲ್ಲಿ ಮತ್ತದೇ ಪ್ರದರ್ಶನ ನೀಡಲು ಯಶಸ್ವಿಯಾಗಿರಲಿಲ್ಲ.

ವಿಶ್ವಕಪ್‌ನಲ್ಲಿ ಒಟ್ಟು 163 ರನ್ ಗಳಿಸಿರುವ ಶಫಾಲಿ ಶರ್ಮಾ ವೈಯಕ್ತಿಕ ಗರಿಷ್ಠ ಮೊತ್ತ ಶ್ರೀಲಂಕಾ ವಿರುದ್ಧ ದಾಖಲಾಗಿತ್ತು. ಶ್ರೀಲಂಕಾ ವಿರುದ್ಧ 47 ರನ್ ಗಳಿಸಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ 18 ಪಂದ್ಯಗಳಲ್ಲೇ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಜಿಗಿದಿದ್ದರು. ಭಯ ರಹಿತ ಬ್ಯಾಟಿಂಗ್ ಶೈಲಿಯು ಶಫಾಲಿ ಬ್ಯಾಟಿಂಗ್ ಅನ್ನು ಪ್ರತಿಬಿಂಬಿಸುತ್ತಿದೆ. ಮುಂದಕ್ಕೆ ಅನುಭವದ ಜೊತೆಗೆ ಪಕ್ವತೆಯನ್ನು ಸಾಧಿಸಿದರೆ ಭಾರತಕ್ಕೆ ದೊಡ್ಡ ಮ್ಯಾಚ್ ವಿನ್ನರ್ ಆಗಲಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.

ಐಸಿಸಿ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಫೈನಲ್ ಪಂದ್ಯವನ್ನು ದಾಖಲೆಯ 86,174 ಮಂದಿ ಪೇಕ್ಷಕರು ವೀಕ್ಷಿಸಿದ್ದರು. ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ಶಫಾಲಿ ವರ್ಮಾ ಕಣ್ಣೀರಿಡುತ್ತಾ ಸ್ಟೇಡಿಯಂ ಬಿಟ್ಟು ಹೋಗಿರಬಹುದು. ಆದರೆ ಇಲ್ಲಿ ಕಲಿತ ಪಾಠ ಹಾಗೂ ಅನುಭವಗಳು ಖಂಡಿತವಾಗಿಯೂ ಭವಿಷ್ಯದಲ್ಲಿ ನೆರವಾಗಲಿದೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಭಾರತಕ್ಕೆ ಚೊಚ್ಚಲ ವಿಶ್ವಕಪ್ ದೊರಕಿಸಿಕೊಡಲು ಸಾಧ್ಯವಾಗಲಿ ಎಂದು ಹಾರೈಸೋಣ.