- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು : ನಾಳೆ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆ

jyothiradhithya [1]

ಬೆಂಗಳೂರು : ಕಾಂಗ್ರೆಸ್ ತೊರೆದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ನಾಳೆ ಅಂದರೆ ಗುರುವಾರ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲೇ ಸಿಂಧಿಯಾ ಕಮಲದ ಕೈ ಹಿಡಿಯಲಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಮಂಗಳವಾರ ಬೆಳಗ್ಗೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದ ಸಿಂಧಿಯಾ ಕಾಂಗ್ರೆಸ್ ತೊರೆಯುವ ಕುರಿತಂತೆ ಮಾತುಕತೆ ನಡೆಸಿದ್ದರು. ಅದರಂತೆ ಈಗ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಸಿಂಧಿಯಾ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ನಿನ್ನೆಯೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅಮಿತ್ ಶಾ ಮತ್ತು ಮೋದಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿಯೇ ಇಂತದ್ದೊಂದು ಊಹಾಪೋಹ ಕೇಳಿ ಬರತೊಡಗಿತ್ತು. ಆದರೆ, ಈ ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ. ಕಾಂಗ್ರೆಸ್ ತೊರೆದು ಸಿಂಧಿಯಾ ಹೊರ ನಡೆದಿದ್ದಾರೆ.

ಇನ್ನು, ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ 22 ಮಂದಿ ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಾಗಿಯೇ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಆಪರೇಷನ್ ಕಮಲಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದೆಯೇ ಶುರುವಾದ ಈ ಹಠಾತ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರ ತೀವ್ರ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ ಎಂಬುದು ಖಾತ್ರಿಯಾಗಿದೆ.