ಹೆಡ್ ಕಾನ್ಸ್ಟೆಬಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನ, ಆರೋಪಿಯ ಕಾಲಿಗೆ ಗುಂಡು

10:28 AM, Friday, March 13th, 2020
Share
1 Star2 Stars3 Stars4 Stars5 Stars
(No Ratings Yet)
Loading...

ramesh

ರಾಮನಗರ : ಚನ್ನಪಟ್ಟಣದ ಕೆ.ಹೆಚ್.ಬಿ ಕಾಲೋನಿಯಲ್ಲಿ ಇತ್ತೀಚೆಗೆ ಮನೆಗೆ ನುಗ್ಗಿ ಸುಲಿಗೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರಮೇಶ್ ಅಲಿಯಾಸ್ ಜಾಕಿಯನ್ನು ಬಂಧಿಸಲಾಗಿದೆ. ಡಿಎಸ್ ಪಿ ಓಂ ಪ್ರಕಾಶ ನೇತೃತ್ವದಲ್ಲಿ ತನಿಖಾಧಿಕಾರಿ ವಸಂತ ಕುಮಾರ್ ರವರು ಮುಖ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮಾರ್ಚ್ 12ರ ರಾತ್ರಿ ಸುಮಾರು 12.45ರ ಸಮಯದಲ್ಲಿ ಆರೋಪಿ ರಮೇಶ್ ನನ್ನು ಕರೆದುಕೊಂಡು ತನಿಖಾಧಿಕಾರಿ ಸಿಬಿಐ ವಸಂತ್, ಪಿ.ಎಸ್.ಐ ಪ್ರಕಾಸ್ ಹಾಗೂ ಸಿಬ್ಬಂದಿಗಳು ತನಿಖೆಗೆ ಸಂಬಂಧಪಟ್ಟಂತೆ ಚಿಕ್ಕಾಮಳೂರು ಗ್ರಾಮಕ್ಕೆ ಹೋಗುತ್ತಿರುವಾಗ, ಆರೋಪಿಯು ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಹಿಡಿಯಲು ಹೋದ ಹೆಡ್ ಕಾನ್ಸ್ಟೆಬಲ್ ನಾಗರಾಜ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿದ್ದು, ಪ್ರಾಣ ರಕ್ಷಣೆಗಾಗಿ ಸಿಪಿಐ ವಸಂತ್ ಕುಮಾರ್ ರವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿಯು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಹೆಡ್ ಕಾನ್ಸ್ಟೆಬಲ್ ನಾಗರಾಜ್ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ಸಂಖ್ಯೆ 39/20 ರಲ್ಲಿ ಸೆಕ್ಷನ್ 307, 353, 332 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರಮೇಶ್ ಅಲಿಯಾಸ್ ಜಾಕಿ ಮೇಲೆ ಬೆಂಗಳೂರು ನಗರ, ಶಿವಮೊಗ್ಗ, ಬಂಟ್ವಾಳ ಸೇರಿದಂತೆ ಕೊಲೆ, ಸುಲಿಗೆ ಮತ್ತಿತರ 15 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English