- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು : ಏಳು ಮಂದಿ ಕಳ್ಳರ ಬಂಧನ; 10 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶ

gold [1]

ಮಂಗಳೂರು : ಕಲ್ಲಿಕೋಟೆಯಿಂದ ಮಂಗಳೂರಿಗೆ ಕಚ್ಚಾ ಬಾರ್ ರೂಪದಲ್ಲಿ ಚಿನ್ನ, ಬೆಳ್ಳಿ ಸಾಗಾಟ ಮಾಡುತ್ತಿದ್ದ ಬಹುದೊಡ್ಡ ಜಾಲವನ್ನು ಭೇದಿಸಿರುವ ಮಂಗಳೂರು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು, ಹಲವರನ್ನು ಬಂಧಿಸಿದ್ದಾರೆ.

ಬೆಂಗಳೂರು, ಮಂಗಳೂರು ಮತ್ತು ಶಿಮೊಗ್ಗದ 40 ಅಧಿಕಾರಿಗಳನ್ನು ಒಳಗೊಂಡ ತಂಡವು ಸಮನ್ವಯ ಮತ್ತು ಸಾಹಸದ ಕಾರ್ಯಾಚರಣೆ ನಡೆಸಿ, ಏಳು ಮಂದಿಯನ್ನು ಬಂಧಿಸಿ, ಸುಮಾರು ನಾಲ್ಕು ಕೋಟಿ ರೂ. ಮೊತ್ತದ 9.3 ಕೆಜಿ ಚಿನ್ನ ಮತ್ತು ಸುಮಾರು 84 ಲಕ್ಷ ರೂ. ಮೊತ್ತದ 5.2 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ಆರಂಭದಲ್ಲಿ ಕಲ್ಲಿಕೋಟೆಯಿಂದ ಮಂಗಳೂರಿಗೆ ಕಚ್ಚಾ ಬಾರ್ ರೂಪದ ಚಿನ್ನ ಕಳ್ಳಸಾಗಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ, ಸಯ್ಯದ್ ಮೊಹಮ್ಮದ್ ಮತ್ತು ಅಶೋಕ ಕೆ.ಎಸ್. ಎಂಬವರನ್ನು ಬಂಧಿಸಿ, 5.6 ಕೆಜಿ ಕಚ್ಚಾ ರೂಪದ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಆರೋಪಿಗಳು ನೀಡಿದ ಮಾಹಿತಿಯಂತೆ, ಬಂಧಿತ ಕಳ್ಳ ಸಾಗಾಟಗಾರರಿಂದ ಚಿನ್ನವನ್ನು ಪಡೆಯಬೇಕಿದ್ದ ಮಂಜುನಾಥ್ ಶೆಟ್ ಯಾನೆ ರೂಪೇಶ್ ಎಂಬಾತನನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಂಧಿಸಲಾಯಿತು.

gold [2]

ಈ ಚಿನ್ನವನ್ನು 100 ಗ್ರಾಂ ಬಾರ್‌ಗಳಾಗಿ ಮರು ವಿಂಗಡಿಸಿ, ವಿದೇಶಿ ಮೊಹರು ಹಾಕಿ, ನಂತರ ಕರ್ನಾಟಕದ ಚಿನ್ನದ ವ್ಯಾಪಾರಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಈ ಮಾಹಿತಿಯಂತೆ, ಮಂಗಳೂರಿನ ಕಾರ್‌ಸ್ಟ್ರೀಟ್, ಉಡುಪಿ ಮತ್ತು ಶಿವಮೊಗ್ಗದ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ, ಹುಡುಕಾಟ ನಡೆಸಲಾಯಿತು. ಕಲ್ಲಿಕೋಟೆಯಲ್ಲಿ ಚಿನ್ನ, ಚಿನ್ನದ ಗಟ್ಟಿ ಮತ್ತು ಆಭರಣಗಳ ಕಳ್ಳ ಸಾಗಾಟಕ್ಕೆ ಸಹಕಾರ ನೀಡುವವರ ಮೂಲ ಪತ್ತೆಹಚ್ಚಿ, ಅವರಿಂದ ಚಿನ್ನ ಮತ್ತು 82 ಲಕ್ಷ ರೂ. ವಶಪಡಿಸಿಕೊಂಡು, ಮುಂದಿನ ಕ್ರಮ ಕೈಗೊಳ್ಳಲಾಯಿತು. ಈ ಜಾಲದ ಮಾಸ್ಟರ್ ಮೈಂಡ್ ಉಡುಪಿಯ ನವೀನ್‍ಚಂದ್ರ ಕಾಮತ್ ಎಂಬಾತನನ್ನೂ ಬಂಧಿಸಲಾಗಿದೆ.

ಕಲ್ಲಿಕೋಟೆ ಮತ್ತು ಮಂಗಳೂರು ನಡುವೆ ನಗದು ಮತ್ತು ಚಿನ್ನವನ್ನು ಅಡಗಿಸಿ ಸಾಗಾಟ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಒಳಗೆ ಪ್ರತ್ಯೇಕ ಬಾಕ್ಸ್‌‌ಗಳನ್ನು ರಚಿಸಿದ್ದು, ಅದರಲ್ಲಿ ಚಿನ್ನ, ಹಣ ಸಾಗಾಟ ಮಾಡುತ್ತಿತ್ತು. ಯಾರಿಗೂ ಗೊತ್ತಾಗದಂತೆ ಮೇಲೆ ಮುಚ್ಚಳ ಹಾಕಲಾಗುತ್ತಿತ್ತು. ಈ ದಂದೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಗಳಿದ್ದು, ಅವರನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.