- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಂಗಳೂರು : ಮಾದಕ ವಸ್ತುಗಳ ಮಾರಾಟ ದಂಧೆ ಮೇಲೆ ಮುಗಿಬಿದ್ದ ಪೊಲೀಸರು

drugs [1]

ಬೆಂಗಳೂರು : ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಹಾವಳಿ ತೀವ್ರಗೊಂಡಿದೆ. ಇದರ ವಿರುದ್ಧ ಸಮರ ಸಾರಿರುವ ಪೊಲೀಸರು, ನಗರದಾದ್ಯಂತ 21 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ನೀಡಿದ್ದ ಕಟ್ಟುನಿಟ್ಟಿನ ಆದೇಶ ಮೇರೆಗೆ ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾರ್ಚ್‌ 09 ರಿಂದ ಮಾರ್ಚ್‌ 17ರವರೆಗೆ ಸತತವಾಗಿ ಕಾರ್ಯಾಚರಣೆ ಕೈಗೊಂಡು, ಮಾದಕವಸ್ತು ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಒಟ್ಟು 26 ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ದ ಎನ್‍ಡಿಪಿಎಸ್ ಕಾಯ್ದೆ ಪ್ರಕಾರ ಒಟ್ಟು 21 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಆರೋಪಿಗಳ ವಶದಿಂದ ಒಟ್ಟು 1 ಕೆ.ಜಿ. 280 ಗ್ರಾಂ ಗಾಂಜಾ ಮತ್ತು 700 ರೂ ನಗದು ಹಣವನ್ನು ಪೊಲೀಸರು ಅಮಾನತುಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ, ತಲಘಟ್ಟಪುರ ಪೊಲೀಸರು 3 ಪ್ರಕರಣ, ಜೆ.ಪಿ.ನಗರ ಪೊಲೀಸರು 3 ಪ್ರಕರಣ, ಜಯನಗರ ಪೊಲೀಸರು 2 ಪ್ರಕರಣ, ಸಿದ್ದಾಪುರ ಪೊಲೀಸರು 6 ಪ್ರಕರಣ, ಕೋಣನಕುಂಟೆ ಪೊಲೀಸರು 1 ಪ್ರಕರಣ, ವಿ.ವಿ.ಪುರಂ ಪೊಲೀಸರು 1 ಪ್ರಕರಣ, ಬನಶಂಕರಿ ಪೊಲೀಸರು 1 ಪ್ರಕರಣ, ಸಿ.ಕೆ. ಅಚ್ಚುಕಟ್ಟು ಪೊಲೀಸರು 3 ಪ್ರಕರಣ, ಹನುಮಂತನಗರ ಪೊಲೀಸರು 1 ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.

ದಕ್ಷಿಣ ವಿಭಾಗದ ಮೇಲ್ಕಂಡ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಾರ್ಯಾಚರಣೆ ಕೈಗೊಂಡು ಮಾಲು ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಉತ್ತಮ ಕಾರ್ಯವನ್ನು ಬೆಂಗಳೂರು ಪೊಲೀಸ್ ಆಯುಕ್ತರ ಶ್ಲಾಘಿಸಿದ್ದಾರೆ.