- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

21 ದಿನಗಳ ಕಾಲ ಮನೆಯಲ್ಲೇ ಇರಿ, ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ : ಪ್ರಧಾನಿ

Modi [1]ನವದೆಹಲಿ:  ಕೊರೋನಾ ವೈರಸ್ ಭಾರತದಲ್ಲಿ ನಿಯಂತ್ರಣ ಮೀರುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತನ್ನ ಭಾಷಣದಲ್ಲಿ ಹೇಳಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ನಿಂದ ಬಾಧಿತವಾಗಿದೆ. ಇದರಿಂದ ದೇಶವನ್ನು ರಕ್ಷಿಸಿಕೊಳ್ಳಬೇಕೆಂದರೆ ದೇಶದ ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು.

ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ರಾತ್ರಿ ಮಧ್ಯರಾತ್ರಿ 12 ಗಂಟೆಯಿಂದ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ನಾವು ಈ ಕ್ಷಣದಿಂದ ಸಂಕಲ್ಪ ಮಾಡೋಣ. ನಮಗೆ ನಾವೇ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡು ಮನೆಯಲ್ಲೇ ಇರಬೇಕು ಎಂದು ಹೇಳಿದರು.

ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಆಗಲಿದೆ. ಇದು ಜನತಾ ಕರ್ಪ್ಯೂಗಿಂತ ಕಠಿಣವಾಗಲಿದೆ. ಒಂದು ರೀತಿಯಲ್ಲಿ ಕರ್ಪ್ಯೂವೇ ಆಗಿರಲಿದೆ. ಇದು ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಿಗೆ ಅನ್ವಯವಾಗಲಿದೆ ಎಂದರು.

ಈ 21 ದಿನಗಳ ಕಾಲ ನಾವು ಎಚ್ಚರಿಕೆಯಿಂದಿರುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ. ಜನರು ಮನೆಯಿಂದ ಹೊರಗೆ ಹೋಗುವ ಒಂದು ಹೆಜ್ಜೆ ಕೂಡ ಕೊರೋನಾದಂತಹ ಗಂಭೀರ ಸಮಸ್ಯೆಗೆ ಆಹ್ವಾನ ನೀಡಬಹುದು.

ಕೊರೋನಾ ವೈರಸ್ ವಿರುದ್ಧ ಹೋರಾಡಲು 15 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದರು.