- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ವೆಲ್ ಕಂ ಟು ಇಂಡಿಯಾ ಕೋವಿಡ್ ವೈರಸ್’ ಎಂದು ಟಿಕ್ ಟಾಕ್ ವಿಡಿಯೋ ಮಾಡಿದ ವ್ಯಕ್ತಿಯ ಬಂಧನ

sayyad [1]ಮಹಾರಾಷ್ಟ್ರ:  ಟಿಕ್ ಟಾಕ್ ದ ವಿಡಿಯೋ ಮೂಲಕ ಕೋವಿಡ್ 19 ವೈರಸ್ ಬಗ್ಗೆ ವಿಕೃತಿ ಮೆರೆದ 40 ವರ್ಷದ ವ್ಯಕ್ತಿಯೊಬ್ಬನನ್ನು ನಾಶಿಕ್ ಗ್ರಾಮಾಂತರ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮಾಲೆಗಾಂವ್ ನಿವಾಸಿ ಸಯ್ಯದ್ ಜಮೀಲ್ ಬಾಬು ಎಂದು ಗುರುತಿಸಲಾಗಿದೆ. ಈತ ಟಿಕ್ ಟಾಕ್ ನಲ್ಲಿ ‘ವೆಲ್ ಕಂ ಟು ಇಂಡಿಯಾ ಕೊರೊನಾ’ ಎಂಬ ಟೈಟಲ್ ಕೊಟ್ಟು ತಾನು ವಿಕೃತಿ ಮೆರೆಯುವ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದ. ಆ ವಿಡಿಯೋದಲ್ಲಿ ಸಯ್ಯದ್ ನೋಟುಗಳನ್ನು ನೆಕ್ಕುತ್ತಾ, ಮೂಗನ್ನು ಅಸಹ್ಯವಾಗಿ ಉಜ್ಜಿಕೊಳ್ಳುತ್ತಾ ತನ್ನ ವಿಕೃತಿಯನ್ನು ಮೆರೆದಿದ್ದ. ಇಷ್ಟು ಮಾತ್ರವಲ್ಲದೇ ಕೋವಿಡ್ 19 ಎಂಬುದು ಪರಿಹಾರ ಇಲ್ಲದಿರುವ ದೇವರ ಶಿಕ್ಷೆ ಎಂದೂ ಸಹ ಹೇಳಿಕೊಂಡಿದ್ದ.

ಸಯ್ಯದ್ ಟಿಕ್ ಟಾಕ್ ಮಾಡಿದ್ದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೈಬರ್ ಕ್ರೈಂ ಪೊಲೀಸರು ಇದರ ಕುರಿತಾಗಿ ಮಾಹಿತಿ ಕಲೆ ಹಾಕಿದ್ದಾರೆ ಮತ್ತು ಈ ವಿಡಿಯೋ ಮೊದಲು ಶೇರ್ ಆಗಿರುವ ಲೊಕೇಷನ್ ಹುಡುಕಾಡಿದ್ದಾರೆ. ಬಳಿಕ ನಾಶಿಕ್ ಗ್ರಾಮಾಂತರ ಠಾಣೆಯ ಪೊಲೀಸರು ಆರೋಪಿ ಸಯ್ಯದ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 153 ಹಾಗೂ 188ರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆರೋಪಿಗೆ ಮಾಲೆಗಾಂವ್ ಸ್ಥಳೀಯ ನ್ಯಾಯಾಲಯವು ಎಪ್ರಿಲ್ 7ರವರೆಗೆ ಪೊಲೀಸ್ ವಶಕ್ಕೊಪ್ಪಿಸಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಮಾಲೆಗಾಂವ್ ನಿವಾಸಿಗಳಾಗಿರುವ ಅಬ್ದುಲ್ ಖುರೇಷಿ (27), ಸಯ್ಯದ್ ಹುಸೇಲ್ ಆಲಿ (23) ಮತ್ತು ಸೂಫಿಯಾನ್ ಮುಖ್ತಾರ್ (24) ಅವರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.