- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿದ್ಯುತ್ ಬಿಲ್ ಪಾವತಿಗೆ ಒತ್ತಡ ಬೇಡ: ಮೆಸ್ಕಾಂಗೆ ಸಚಿವರ ಸೂಚನೆ

corona-meeting [1]ಮಂಗಳೂರು :  ಜಿಲ್ಲೆಯಲ್ಲಿ ವಿದ್ಯುತ್ ಬಿಲ್‍ಗಳ ಬಗ್ಗೆ ಜನರು ಹಲವು ದೂರುಗಳನ್ನು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಮನೆ ಮತ್ತು ಸಣ್ಣ ಉದ್ಯಮಕ್ಕೆ ಕಡಿಮೆ ಸರಾಸರಿ ಇರುವ ತಿಂಗಳ ಬಿಲ್ ಆಧಾರದಲ್ಲಿ ಬಿಲ್ ನೀಡಬೇಕು . ಜೂನ್ ತಿಂಗಳಿನವರೆಗೂ ಕಡ್ಡಾಯವಾಗಿ ಬಿಲ್ ಪಾವತಿಸುವಂತೆ ಒತ್ತಡ ಹೇರುವಂತಿಲ್ಲ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತಿವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿದೇಶ ಮತ್ತು ರಾಜ್ಯದಲ್ಲಿ ಬಾಕಿ ಉಳಿದಿರುವ ದ.ಕ. ಜಿಲ್ಲೆಯ ಪ್ರಯಾಣಿಕರು ಸೇವಾ ಸಿಂಧೂ ಆಪ್ ಮೂಲಕ ನೋಂದಾವಣೆ ಮಾಡಿಕೊಂಡು ಜಿಲ್ಲೆಗೆ ಬರುವುದಕ್ಕೆ ದ.ಕ ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ. ಜಿಲ್ಲೆಗೆ ಬಂದವರಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ ಈಗಾಗಲೇ ಸೇವಾ ಸಿಂಧೂ ಮೂಲಕ 6,092 ಅರ್ಜಿಗಳು ಸ್ವೀಕೃತವಾಗಿದ್ದು, ಸಲ್ಲಿಸಿರುವ ಅರ್ಜಿಯಲ್ಲಿ ಕುಟುಂಬ ಸದಸ್ಯರು ಸೇರಿ ಸಮಾರು 24 ಸಾವಿರದಿಂದ 25 ಸಾವಿರದಷ್ಟು ಜನರು ಜಿಲ್ಲೆಗೆ ಆಗಮಿಸಬಹುದು ಎಂದು ಜಿಲ್ಲಾಡಳಿತದಿಂದ ಆಂದಾಜಿಸಲಾಗಿದೆ. 1229 ಅರ್ಜಿಗಳು ಮಹಾರಾಷ್ಟ್ರದಿಂದ ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರಿಗೆ ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಅಗತ್ಯ ಕ್ರಮವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ತಿಳಿದರು.

ವಿದೇಶದಿಂದ ಬರುವವರಿಗೆ ಪ್ರತೇಕವಾದ ಹೋಟೆಲ್ ವ್ಯವಸ್ಥೆಯನ್ನು ಮಾಡಲಾಗಿದ್ದು ಅಲ್ಲಿ ಕನಿಷ್ಠ ಮಟ್ಟದಲ್ಲಿ ಶುಲ್ಕವನ್ನು ವಿಧಿಸಿ ಅವರನ್ನು ಹೋಟೆಲ್ ಕ್ವಾರಂಟೈನ್ ಮಾಡಲಾಗುತ್ತದೆ. ಹಾಗೆಯೇ ಬೇರೆ ರಾಜ್ಯದಿಂದ ಆಗಮಿಸುವರಿಗೆ ಸರ್ಕಾರಿ ಹಾಸ್ಟೆಲ್ ಮತ್ತು ಸ್ಥಳೀಯ ಹೋಟೆಲ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 3500 ಕೊಠಡಿಗಳನ್ನು ಕ್ವಾರೆಂಟೈನ್‍ಗಾಗಿ ಖಾಯಂಗೊಳಿಸಲಾಗಿದೆ ಎಂದರು.

ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿ 18 ಹಾಸ್ಟೆಲ್ ಮತ್ತು 2 ಹೋಟೆಲ್‍ನಲ್ಲಿ 185 ಜನರಿಗೆ, ಮೂಡಬಿದಿರೆಯಲ್ಲಿ 3 ಹಾಸ್ಟೆಲ್ ನಲ್ಲಿ 150 ಜನರಿಗೆ, ಸುಬ್ರಹ್ಮಣ್ಯ ಮತ್ತು ಸುಳ್ಯದಲ್ಲಿ 12 ಹಾಸ್ಟೆಲ್ ನಲ್ಲಿ 1050 ಜನರಿಗೆ, ಪುತ್ತೂರುನ 12 ಹಾಸ್ಟೆಲ್‍ನಲ್ಲಿ 500 ಜನರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳ್ತಂಗಡಿಯಲ್ಲಿ ಧರ್ಮಸ್ಥಳದಿಂದ 300 ಕೊಠಡಿ ನಿಗದಿ ಪಡಿಸಿದ್ದು ಹೆಚ್ಚುವರಿಯಾಗಿ 200 ಕೊಠಡಿ ನೀಡಲು ಕೋರಲಾಗಿದ್ದು ಹಾಗೂ ಹೋಟೆಲ್‍ಗಳನ್ನು ಕೂಡ ನಿಗದಿಪಡಿಸಲಾಗಿದೆ. ತಾಲೂಕಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪ್ರತಿನಿತ್ಯ ಸಭೆ ಮಾಡಬೇಕು ಮತ್ತು ಅಗತ್ಯತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದರು.

ಸಭೆಯಲ್ಲಿ ಸಂಸದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ ಖಾದರ್, ಐವನ್ ಡಿಸೋಜ, ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮತ್ತು ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.