ಪಿಯುಸಿ: ಪಿಸಿಎಂಬಿ, ಇಂಗ್ಲೀಷ್‌ ಭಾಷಾ ಉತ್ತರ ಪತ್ರಿಕೆ ಮೌಲ್ಯಮಾಪನವಿಲ್ಲ

9:32 PM, Thursday, May 28th, 2020
Share
1 Star2 Stars3 Stars4 Stars5 Stars
(No Ratings Yet)
Loading...

suresh-kumar ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಯಾವುದೇ ಉಪನ್ಯಾಸಕರ ಸುರಕ್ಷತೆಗೆ ಭಂಗ ಬಾರದ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಕೊರೋನಾ ಸೃಷ್ಟಿಸಿರುವ ಅನಿವಾರ್ಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರೈಸಬೇಕಾದ ಅಗತ್ಯತೆಯನ್ನು ತಾವು ಸಹ ಒಪ್ಪುತ್ತೀರೆಂಬುದು ನನ್ನ ಭರವಸೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಮೇ. 27 ರಿಂದ ಪ್ರಾರಂಭವಾಗಿರುವ ಮೌಲ್ಯಮಾಪನ ಪ್ರಕ್ರಿಯೆ ಪ್ರಸ್ತುತ ಲಭ್ಯವಿರುವ ಮೌಲ್ಯಮಾಪಕರ ಆಧಾರದ ಮೇಲೆ ರೂಪಿತವಾಗಿದೆ. ಶಿವಮೊಗ್ಗ, ದಾವಣಗೆರೆ , ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಕಲ್ಬುರ್ಗಿ ಹಾಗೂ ಬೆಂಗಳೂರಿನಲ್ಲಿನ ಒಟ್ಟು 43 ಮೌಲ್ಯಮಾಪನ ಕೇಂದ್ರಗಳಲ್ಲಿ ಪಿಸಿಎಂಬಿ ಹಾಗೂ ಆಂಗ್ಲ ಭಾಷೆ ಹೊರತುಪಡಿಸಿ ಉಳಿದ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಈ ಬಾರಿ ವಿಜ್ಞಾನ ವಿಷಯಗಳನ್ನೂ ಸಹ ವಿಕೇಂಧ್ರೀಕೃತವಾಗಿ ಮೌಲ್ಯಮಾಪನ ವ್ಯವಸ್ಥೆ ನಿರ್ವಹಿಸುವ ಬಗ್ಗೆ ನಾನು ಮುಕ್ತ ಮನಸ್ಸನ್ನು ಹೊಂದಿದ್ದೇನೆ. ಸಾಗಾಣಿಕಾ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಸುರಕ್ಷತೆಯ ದೃಷ್ಟಿಯಿಂದ ಇದು ಸಮರ್ಪಕವಾಗಿ ನಿರ್ವಣೆಯಗುವುದು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಈಗಾಗಲೇ ನಾನು ಅಧಿಕಾರಿಗಳಿಗೆ ಸೂಚನೆ ಸಹ ನೀಡಿದ್ದೇನೆ. ಕೊರೋನೋತ್ತರ ಸಾಮಾಜಿಕ ಸಂಧರ್ಭಕ್ಕನುಗುಣವಾಗಿ ಮುಂದಿನ ದಿನಗಳಲ್ಲಿ ಆಂಗ್ಲ ಭಾಷಾ ಪತ್ರಿಕೆಯ ಮೌಲ್ಯಮಾಪನವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಹಾಗೂ ಈ ಮೂಲಕ ಮೌಲ್ಯಮಾಪಕರ ಹಿತವನ್ನೂ ಕಾಯಲಾಗುತ್ತದೆ.

ಈ ಬಾರಿ ನಮ್ಮ ಉಪನ್ಯಾಸಕರಿಗೆ ಮೌಲ್ಯಮಾಪನವನ್ನು ಹೊರೆಯಾಗದ ರೀತಿಯಲ್ಲಿ ವಹಿಸಲಾಗಿದೆ ಎಂಬ ಅಂಶವನ್ನು ನೀವೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ದೂರದಿಂದ ಮೌಲ್ಯಮಾಪನ ಕೇಂದ್ರಕ್ಕೆ ಬರಲು ಸಾಧ್ಯವಾಗದ ಉಪನ್ಯಾಸಕರಿಗೆ, ಗರ್ಭಿಣಿಯರಿಗೆ , ಆರೋಗ್ಯ ಸಮಸ್ಯೆಯಿರುವವರಿಗೆ, ಕಂಟೈನ್ಮೆಂಟ್ ವಲಯಗಳಲ್ಲಿರುವವರಿಗೆ, ಕೊರೋನಾ ಸೋಂಕಿತ ಸಂಬಂಧಿಗಳನ್ನು ಹೊಂದಿರುವವರು ಸೇರಿ ಹಲವಾರು ಬಗೆಯ ಉಪನ್ಯಾಸಕರಿಗೆ ಮೌಲ್ಯಮಾಪನದಿಂದ ವಿನಾಯ್ತಿಯನ್ನು ನೀಡಲಾಗಿದ್ದು, ಮೌಲ್ಯಮಾಪನ ಕಾರ್ಯಕ್ಕೆ ದೂರದ ಊರುಗಳಿಂದ ಹಾಜರಾಗುವ ಉಪನ್ಯಾಸಕರಿಗೆ ಸ್ಥಳೀಯವಾಗಿ ಉಳಿದುಕೊಳ್ಳಲು ಮತ್ತು ಊಟೋಪಚಾರಗಳಿಗೆ ಪಾವತಿ ಆಧಾರದ ವ್ಯವಸ್ಥೆಯನ್ನೂ ಸಹ ಪದವಿ ಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿದೆ ಎಂಬ ಅಂಶವನ್ನು ನೇವೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.

ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನೆರವೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲು ಉಪನ್ಯಾಸಕ ಮಿತ್ರರನ್ನು ಕೋರುತ್ತೇನೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English