- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹುಬ್ಬಳ್ಳಿಗೆ ಇನ್ಮೇಲೆ ವಿಮಾನ ಬರಲ್ಲ, ಇಲ್ಲಿಂದ ಹೋಗಲ್ಲ

star Airlines [1]ವರದಿ: ಶಂಭು, ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ- ಹುಬ್ಬಳ್ಳಿ: ಲಾಕ್ ಡೌನ್‌ ನಿಂದ ಎರಡು ತಿಂಗಳುಗಳ ಕಾಲ ಬಂದ್‌ ಆಗಿದ್ದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಮೂರು ದಿನಗಳ ಹಿಂದೆ ಸ್ಟಾರ್‌ ಏರ್‌ ಲೈನ್ಸ್‌ ಸಂಸ್ಥೆಯು ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ ಮತ್ತು ಮುಂಬಯಿಗೆ ವಿಮಾನ ಸಂಚಾರ ಆರಂಭಿಸಿತ್ತು.

ಆದರೀಗ ಕೇವಲ ಮೂರೇ ದಿನಗಳಲ್ಲಿ ಈ ಸಂಸ್ಥೆಯು ನಗರದಿಂದ ಸಂಚರಿಸುತ್ತಿದ್ದ ತನ್ನೆಲ್ಲ ವಿಮಾನಯಾನಗಳನ್ನು ದಿಢೀರ್‌ ಎಂದು ಬಂದ್‌ ಮಾಡಿದೆ.
ಈ ಬಗ್ಗೆ ವಿಚಾರಿಸಿದರೆ, ಪ್ರಯಾಣಿಕರ ಕೊರತೆ ಹಾಗೂ ತಾಂತ್ರಿಕ ದೋಷ ಎಂದು ಸಂಸ್ಥೆ ತಿಳಿಸಿದೆ. ಈ ಹಿಂದೆ ಇಂಡಿಗೋ, ಸ್ಪೈಸ ಜೆಟ್‌ ಮತ್ತು ಏರ ಇಂಡಿಯಾದ ವಿಮಾನಗಳು ಇಲ್ಲಿಂದ ಸಂಚರಿಸುತ್ತಿದ್ದವು. ಆ ಸಂಸ್ಥೆಗಳೂ ಕೂಡ ತಮ್ಮ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ. ಕೇವಲ ಸ್ಟಾರ್‌ ಏರಲೈನ್ಸ್‌ ಮಾತ್ರ ಸೇವೆಯನ್ನು ಆರಂಭಿಸಿತ್ತು.

ಇತ್ತೀಚೆಗೆ ವಿಮಾನಯಾನ ನಗರದಿಂದ ಆರಂಭವಾದಾಗ ಕೇವಲ ಆರೇಳು ಜನ ಮಾತ್ರ ಆಗಮಿಸಿದ್ದಾರೆ. ಹೋಗುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೊರೋನಾ ಸೋಂಕಿನ ಭಯದಿಂದ ಪ್ರಯಾಣಿಕರು ವಿಮಾನಯಾನಕ್ಕೆ ಅಷ್ಟಾಗಿ ಒಲವು ತೋರುತ್ತಿಲ್ಲ ಎನ್ನಲಾಗಿದೆ.

ಇತ್ತೀಚೆಗೆ ಬೆಂಗಳೂರಿನಿಂದ ಬರಬೇಕಾಗಿದ್ದ ವಿಮಾನಗಳು ಹುಬ್ಬಳ್ಳಿಗೆ ತಾಂತ್ರಿಕ ಕಾರಣದ ನೆಪವೊಡ್ಡಿ ಬಂದಿರಲಿಲ್ಲ. ಇನ್ನು ಕೇವಲ ಆರೇಳು ಜನರಿಗಾಗಿ ದೊಡ್ಡ ವಿಮಾನಗಳನ್ನು ಬಿಡುವುದರಿಂದ ಇಂಧನದ ವೆಚ್ಚವೂ ಮರಳಲ್ಲ ಎಂಬುದು ಸಂಸ್ಥೆಯ ಚಿಂತೆಯಾಗಿದೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಅಧಿಕಾರಿ ಶಶಿಕಾಂತ, ವಿಮಾನದಲ್ಲಿ ವಿದೇಶದಿಂದ ಬಂದವರಿಂದಲೇ ಕೊರೋನಾ ಹೆಚ್ಚು ಹರಡಲು ಕಾರಣವಾಗಿರುವುದರಿಂದ ಮತ್ತು ವಿಮಾನದಲ್ಲಿ ಏರ ಕಂಡೀಷನರ್‌ ಇರುವುದರಿಂದ ಪ್ರಯಾಣಿಕರು ಸೋಂಕಿನ ಭಯದಿಂದ ಹೆಚ್ಚು ಬರುತ್ತಿಲ್ಲ ಎಂದು ತಿಳಿಸಿದ್ದಾರೆ.

ನಿತ್ಯ ನಗರಕ್ಕೆ ಎರಡು ವಿಮಾನಗಳು ಬರುತ್ತಿದ್ದವು. ಈಗ ಅವುಗಳೂ ನಿಂತಿವೆ. ನಗರದಿಂದ ಬೆಂಗಳೂರಿಗೆ ತೆರಳುವವರು ರಸ್ತೆ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಸಂಚಾರ ಆರಂಭಿಸುವುದಾಗಿ ಸ್ಟಾರ್‌ ಏರ್‌ ಲೈನ್ಸ್‌ ತಿಳಿಸಿದೆ.