- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸರಕಾರಿ ಸಾಲಮನ್ನಾದ ಹೆಚ್ಚಿನ ಲಾಭ ಪಡೆದವರು ದಕ್ಷಿಣ ಕನ್ನಡ, ಉಡುಪಿ ಮೀನುಗಾರರು

fishing [1]ಭಟ್ಕಳ : ರಾಜ್ಯ ಸರಕಾರ ಘೋಷಣೆ ಮಾಡಿದ್ದ ಮೀನುಗಾರರ ಸಾಲಮನ್ನಾದ ಲಾಭವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರೇ ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಎಂದು ಇಲ್ಲಿಯ ಮೀನುಗಾರರ ಮುಖಂಡ ವಸಂತ ಖಾರ್ವಿ ಹೇಳಿದ್ದಾರೆ.

ಅವರು ನಗರದ ಮಾವಿನಕುರ್ವೆ ಬಂದರಿನ ಬೋಟ್‌ ಯೂನಿಯನ್‌ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಸಮುದಾಯದವರಿಗೂ ನೆರವು ನೀಡುತ್ತಿದೆ. ಆದರೆ ಮೀನುಗಾರರನ್ನು ಕಡೆಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಮೀನು ಕ್ಷಾಮ ಕಳೆದೆರಡು ವರ್ಷಗಳಿಂದ ಮೀನುಗಾರರನ್ನು ಕಾಡುತ್ತಿದ್ದೆ. ಜೊತೆಗೆ ಚಂಡಮಾರುತದಿಂದ ಸಮುದ್ರಕ್ಕೆ ಇಳಿಯಲಾಗುತ್ತಿಲ್ಲ. ಆದ್ದರಿಂದ ಈ ಭಾಗದ ಮೀನುಗಾರರಿಗೂ ಸರಕಾರ ಸಾಲಮನ್ನಾ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲ ಕಲ್ಪಿಸಬೇಕು ಎಂದರು.

ಈ ಕುರಿತು ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸ್ಥಳೀಯ ಶಾಸಕ ಸುನೀಲ ನಾಯ್ಕ್‌ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸಾಲ ಸೋಲ ಮಾಡಿ ಮೀನುಗಾರಿಕೆಗೆಂದು ಬೋಟ್‌ ತೆಗದುಕೊಂಡವರು ಸಾಲ ತುಂಬಲಾಗದೇ ಒದ್ದಾಡುತ್ತಿದ್ದಾರೆ. ಮೀನುಗಾರಿಕೆಗೆ ಕೇವಲ 15 ದಿವಸ ಅವಕಾಶ ನೀಡಿದ್ದರೂ ಬೇರೆಡೆಯಿಂದ ಬಂದಿರುವ ಬೋಟ್‌ ಗಳಿಂದ ನಮ್ಮವರಿಗೆ ಮೀನು ಸಿಗುತ್ತಿಲ್ಲ. ಆದ್ದರಿಂದ ಒಂದು ಬೋಟಿಗೆ 5 ಲಕ್ಷ ರೂ.ನಂತೆ ಪ್ರತಿ ಮೀನುಗಾರರಿಗೆ ಪರಿಹಾರ ನೀಡಬೇಕು ಮತ್ತು ಕರಾವಳಿ ಕಾವಲು ಪಡೆಯವರು ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.