- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾರ್ವಜನಿಕರಿಗೆ ವಿತರಿಸಲು 1.27 ಲಕ್ಷ ಸಸಿಗಳನ್ನು ಸಿದ್ಧಪಡಿಸಿದ ಅರಣ್ಯ ಇಲಾಖೆ

plants [1]ಮಂಗಳೂರು: ಪಡೀಲ್‌ನಲ್ಲಿರುವ ಮಂಗಳೂರು ಅರಣ್ಯ ವಿಭಾಗದ “ಸಸ್ಯ ಕ್ಷೇತ್ರ’ದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ವಿತರಿಸಲು 1.27 ಲಕ್ಷ ಸಸಿಗಳನ್ನು ಸಿದ್ಧಪಡಿಸಿಡಲಾಗಿದೆ. ಜೂ.1ರಿಂದ ವಿತರಣೆ ಆರಂಭವಾಗಿದೆ ಎಂದು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್‌ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, 2020-21ನೇ ಸಾಲಿನಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಸಸಿ ವಿತರಿಸಲು 40,000 ಸಾಗುವಾನಿ, ನೆಲ್ಲಿ, ನುಗ್ಗೆ, ಪೇರಳೆ, ಬೀಟೆ, ಬಿಲ್ವಪತ್ರೆ, ಸೀತಾಫಲ, ಶಿವಣೆ, ಶ್ರೀಗಂಧ, ಹೂವಾಸಿ, ಹೆಬ್ಬೇವು, ಕರಿಬೇವು, ಸಂಪಿಗೆ, ಸುರಹೊನ್ನೆ, ನೇರಳೆ, ಪನ್ನೇರಳೆ ಸಹಿತ 36ಕ್ಕೂ ಅಧಿಕ ವಿಧದ 50,000 ಗಿಡ ಸಿದ್ಧಪಡಿಸಲಾಗಿದೆ. ರಸ್ತೆ ಬದಿ ನೆಡು ತೋಪು ಬೆಳೆಸಲು 1,980 ಗಿಡ, ಇತರ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳಿಗಾಗಿ ಕಡಿದ ಮರದ ಬದಲಿಗೆ ಎರಡು ಸಸಿ ನೆಡಲು ವಿವಿಧ ಇಲಾಖೆಗಳಿಂದ ಪಾವತಿಸಿಕೊಂಡ ಹಣದಲ್ಲಿ ಸಸಿ ನಾಟಿ ಮಾಡಲು 6,000 ಗಿಡಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಹಸುರು ಕರ್ನಾಟಕ ಯೋಜನೆಯಡಿ ಕಳೆದ ಸಾಲಿನಲ್ಲಿ ತೆಂಕ ಎಡಪದವು, ಬಡಗ ಎಕ್ಕಾರು ಮತ್ತು ಬೆಂಗರೆಯಲ್ಲಿ 25 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಸಿದ ನೆಡುತೋಪಿನಲ್ಲಿ ಬದಲಿಯಾಗಿ ನೆಡಲು 500 ಗಿಡ ಸಿದ್ಧಪಡಿಸಲಾಗಿದೆ. ಈ ಯೋಜನೆಯಡಿ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜು ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಉಚಿತವಾಗಿ ವಿತರಿಸಲು ಸಾಗುವಾನಿ, ಶ್ರೀಗಂಧ ಮತ್ತು ಮಹಾಗನಿ ಸೇರಿ 11 ಸಾವಿರ ಗಿಡ ಸಿದ್ಧಪಡಿಸಲಾಗಿದೆ.

ಮಂಗಳೂರು ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕೃಷ್ಣ ನಾಯ್ಕ, ಅರಣ್ಯ ರಕ್ಷಕ ಸೋಮನಿಂಗ ಎಚ್‌.ಹಿಪ್ಪರಗಿ ಉಪಸ್ಥಿತರಿದ್ದರು.