- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಾರ್ವಜನಿಕ ಸ್ಥಳದಲ್ಲಿ ಪಾನ್ ತಿಂದವರ ಮೇಲೆ 32 ಕೇಸು ದಾಖಲು 

tobaco [1]ಮಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ತಿನ್ನುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, 32 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ತಂಡವು ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಕೋಪ್ಟಾ -2003 ಕಾಯಿದೆ ಉಲ್ಲಂಘನೆ ವಿರುದ್ದ ನಗರದ ಹೊರವಲಯದ ದೇರಳಕಟ್ಟೆ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್‍ಸ್ಟಾಂಡ್, ರಸ್ತೆ ಬದಿಗಳಲ್ಲಿ, ಅಂಗಡಿ ವಠಾರ ಮತ್ತಿತರ ಸ್ಥಳಗಳಲ್ಲಿ ಹಲವು ಮಂದಿ ಬಹಿರಂಗವಾಗಿಯೇ ಪಾನ್ ಮಸಾಲೆ ಹಾಗೂ ತಂಬಾಕು ಉತ್ಪನ್ನಗಳನ್ನು ತಿನ್ನುತ್ತಿದ್ದವರ ವಿರುದ್ಧ ಸ್ಥಳದಲ್ಲಿಯೇ ಪ್ರಕರಣ ದಾಖಲಿಸಿಕೊಂಡಿದೆ. ಒಟ್ಟು 32 ಪ್ರಕರಣ ದಾಖಲಿಸಿ ರೂ. 3100 ದಂಡ ವಿಧಿಸಲಾಯಿತು.

ಇದೇ ಸಂದರ್ಭದಲ್ಲಿ ಕೋಪ್ಟಾ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ಹಾಗೂ ತಂಬಾಕು ಉತ್ಪನ್ನಗಳನ್ನು ತಿನ್ನದಂತೆ ಗ್ರಾಹಕರಿಗೆ ಸೂಚಿಸಲು ಅಂಗಡಿ ಮಾಲೀಕರಿಗೆ ಸೂಚಿಸಲಾಯಿತು. ಅಲ್ಲದೇ, ಈ ಕುರಿತು ಸಹಕರಿಸದಿದ್ದರೆ, ಕಾಯಿದೆಯನ್ವಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು.

ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್ 19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಂಭವ ಅಧಿಕವಾಗಿದೆ. ಪ್ರಸಕ್ತ ಕೋವಿಡ್ ವ್ಯಾಪಕವಾಗಿರುವುದರಿಂದ ಈ ರೀತಿ ಪಾನ್ ಮಸಾಲೆ ತಿಂದು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಹೆಚ್ಚು ಅಪಾಯಕಾರಿಯಾಗಿದೆ. ಇಂತಹ ಉಗುಳನ್ನು ಇತರ ಸಾರ್ವಜನಿಕರಿಗೆ ನಡೆದುಕೊಂಡು ಹೋಗುವಾಗ ಗೊತ್ತಿಲ್ಲದೇ ಮೆಟ್ಟುವುದರಿಂದ ಇದು ಸಾಂಕ್ರಾಮಿಕ ರೋಗ ಹಬ್ಬಲೂ ಕಾರಣವಾಗುತ್ತಿದೆ.

ಈ ಕಾರ್ಯಾಚರಣೆಯಲ್ಲಿ ಹಿರಿಯ ಆಹಾರ ಸುರಕ್ಷತಾಧಿಕಾರಿ ರಾಜು, ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್, ಕೋಣಾಜೆ ಠಾಣಾ ಪೊಲೀಸ್ ಉಪ ನಿರೀಕ್ಷಕ ಶರಣಪ್ಪ, ಸಿಬ್ಬಂದಿ ಪುನೀತ್, ವಿದ್ಯಾ ಮತ್ತಿತರು ಉಪಸ್ಥಿತರಿದ್ದರು.

ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಆಹಾರ ಸುರಕ್ಷತಾಧಿಕಾರಿಗಳು ತಿಳಿಸಿದ್ದಾರೆ.