ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿತ : ಸಚಿವ ಎಸ್.ಸುರೇಶ್ ಕುಮಾರ್

11:29 PM, Tuesday, June 9th, 2020
Share
1 Star2 Stars3 Stars4 Stars5 Stars
(No Ratings Yet)
Loading...

Suresh Kumarಉಡುಪಿ : ಈ ವರ್ಷದ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವುದು ವಿಳಂಬವಾಗಲಿದ್ದು, ವಿದ್ಯಾರ್ಥಿ ಗಳಿಗೆ ತೊಂದರೆಯಾಗದಂತೆ ಪ್ರಸಕ್ತ ವರ್ಷದ ಶಾಲಾ ಪಠ್ಯವನ್ನು ಕಡಿಮೆ ಮಾಡಲು ಚಿಂತನೆ ನಡೆದಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಉಡುಪಿ ಜಿಪಂ ಸಭಾಂಗಣದಲ್ಲಿ, ಜೂ.25ರಿಂದ ಪ್ರಾರಂಭಗೊಳ್ಳುವ ಎಸೆಸೆಲ್ಸಿ ಪರೀಕ್ಷೆ ಪೂರ್ವ ಸಿದ್ದತೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು  ಉಡುಪಿ, ಉತ್ತರ ಕನ್ನಡ ಮತ್ತು ದ.ಕನ್ನಡ ಜಿಲ್ಲೆಗಳ ಜಿಪಂ ಸಿಇಓಗಳು, ಡಿಡಿಪಿಐಗಳು ಮತ್ತು ಬಿಇಓ ಗಳೊಂದಿಗೆ   ಚರ್ಚಿಸಿದರು.

ಕೋವಿಡ್-19ರ ಕಾರಣದಿಂದ ಪ್ರಸಕ್ತ ಸಾಲಿನಲ್ಲಿ ಶಾಲಾ ಶೈಕ್ಷಣಿಕ ಅವಧಿ ಕಡಿಮೆಯಾಗಲಿದ್ದು, ಇದಕ್ಕಾಗಿ ಶಾಲಾ ಪಠ್ಯವನ್ನು ಕಡಿಮೆಗೊಳಿಸುವ ಕುರಿತಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳ ಮುಂದಿನ ತರಗತಿಗೆ ಅಗತ್ಯವಿರುವ ಪಠ್ಯದ ಕೊರತೆಯಾಗದಂತೆ ಸೀಮಿತ ಅವಧಿಯೊಳಗೆ ಅತ್ಯಗತ್ಯ ಇರುವ ಪಠ್ಯ ಮಾತ್ರ ಒಳಗೊಳ್ಳುವಂತೆ ಪಠ್ಯಕ್ರಮವನ್ನು ಕಡಿಮೆ ಮಾಡಲು ಚಿಂತನೆ ಇದೆ ಎಂದು ಸಚಿವ ಸುರೇಶ್‌ ಕುಮಾರ್ ಹೇಳಿದರು.

ಕೋವಿಡ್-19 ಅವಧಿಯಲ್ಲಿ ರಾಜ್ಯದ ಎಸೆಸೆಲ್ಸಿ ಮಕ್ಕಳಿಗೆ ಚಂದನ ವಾಹಿನಿಯ ಮೂಲಕ ಪರೀಕ್ಷೆಗಾಗಿ ಪಠ್ಯದ ಪುನರ್‌ಮನನ ಕಾರ್ಯಕ್ರಮ ವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಚಿಂತನೆಯೂ ನಡೆದಿದೆ. ಈ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವೆಡ್‌ಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.

ಕೋವಿಡ್ ಅವಧಿಯಲ್ಲಿ ರಾಜ್ಯದ ಶಿಕ್ಷಕರು ಕಾನನ ಶಾಲೆ, ವಠಾರ ಶಾಲೆ, ಓಣಿ ಶಾಲೆ, ಓದಿನ ಮನೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಗಳ ಮೂಲಕ ಮಕ್ಕಳಿಗೆ ಪಾಠ ಮಾಡಿದ್ದು, ಇದು ಶಿಕ್ಷಕರಲ್ಲಿನ ಸೃಜನ ಶೀಲತೆ, ಕತೃತ್ವ ಶಕ್ತಿ ಗುಣಗಳನ್ನು ತೋರಿಸುತ್ತದೆ ಈ ಕುರಿತಂತೆ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸುವುದಾಗಿ ಸಚಿವರು ಹೇಳಿದರು.

ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಸಲು ಸಂಬಂದಿಸಿದಂತೆ ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಂತೆ, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಸ್ಯಾನಿಟೈಜರ್, ಸುರಕ್ಷತಾ ಅಂತರ ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾ ಗುವುದು. ಪರೀಕ್ಷಾ ವಿಧಾನಗಳಿಗೆ ಯಾವುದೇ ಕುಂದುಬಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಗರಿಷ್ಠ ಸುರಕ್ಷತೆಗೆ ಆದ್ಯತೆ ನೀಡಿದೆ. ಪರೀಕ್ಷೆ ಕುರಿತಂತೆ ಮಕ್ಕಳಿಗೆ ಹಿತಕರ ವಾತಾವರಣ ನಿರ್ಮಿಸಿ, ಯಾವುದೇ ಆತಂಕಕ್ಕೆ ಒಳಗಾಗದಂತೆ ಪರೀಕ್ಷೆ ಬರೆಯಲು ಶಿಕ್ಷಕರು ಪ್ರೋತ್ಸಾಹ ತುಂಬುವಂತೆ ಸಚಿವ ಸುರೇಶ್ ಕುಮಾರ್ ಕರೆ ನೀಡಿದರು.

ರಾಜ್ಯದಲ್ಲಿ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ತರುವ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ನಡೆಸಲಾಗುವುದು. ಪ್ರಸಕ್ತ ವರ್ಷದಲ್ಲಿ ಶಾಲಾ ಮಕ್ಕಳ ಹಾಜರಾತಿ ಗಣನೆಗೆ ತೆಗೆದುಕೊಂಡು ಶಾಲೆಗಳಲ್ಲಿನ ಹೆಚ್ವುವರಿ ಶಿಕ್ಷಕರ ವರ್ಗಾವಣೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಖಾಸಗಿಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಜಿಲ್ಲಾ ಕೇಂದ್ರಕ್ಕೆ ಆಗಮಿಸುವವರಿಗೆ ಜಿಲ್ಲೆಯಲ್ಲಿ ಉಳಿಯಲು ಹಾಸ್ಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ರಾಜ್ಯ ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ದ.ಕನ್ನಡ ಜಿಪಂ ಸಿಇಓ ಸೆಲ್ವಮಣಿ, ಉ.ಕನ್ನಡ ಜಿಪಂ ಸಿಇಓ ರೋಶನ್, ಉಡುಪಿ ಎಸ್‌ಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English