- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕ್ವಾರಂಟೈನ್ ನಿಯಮ ಉಲ್ಲಂಘನೆ, ಮೊಬೈಲ್ ಬಂದ ಮಾಡಿದರೆ ಎಪ್‍ಐಆರ್

MG hiremat [1]ಗದಗ : ಹೋಂ ಕ್ವಾರಂಟೈನ್, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿರುವ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್ ಪ್ರದೇಶದಿಂದ ಬೇರೆ ಕಡೆಗೆ ಚಲನ ವಲನ ಮಾಡುವುದಾಗಲಿ ಅಥವಾ ತಮ್ಮ ಮೊಬೈಲ್‍ಗಳನ್ನು ಸ್ವಿಚಾಫ್ ಮಾಡಬಾರದು. ಒಂದು ವೇಳೆ ಉದ್ದೇಶಪೂರ್ವಕವಾಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅಥವಾ ಮೊಬೈಲ್ ಸ್ವಿಚಾಫ್ ಮಾಡಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಐ.ಪಿ.ಸಿ. ಸೆಕ್ಷನ್ 188 ರನ್ವಯ ಎಫ್ಐಆರ್ ದಾಖಲಿಸಲಾಗುವುದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಸಾಂಕ್ರಾಮಿಕ ಪಿಡುಗಾದ ಕೋವಿಡ್-19 ಸೋಂಕು ತಡೆಗಟ್ಟಲು ಸರಕಾರ ಕೋವಿಡ್-19 ಕ್ವಾರಂಟೆನ್ ಅಲರ್ಟ ಸಿಸ್ಟಮ್ ಅನ್ನು ಪ್ರಾರಂಭಿಸಿದೆ. ಈ ವ್ಯವಸ್ಥೆಯಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‍ಗೆ ಕಳುಹಿಸಲಾಗಿರುತ್ತದೆ. ಸದರಿ ವ್ಯಕ್ತಿಗಳ ಮೊಬೈಲ್ ನಂಬರುಗಳ ನೆಟ್ ವರ್ಕ್ ಆಧಾರದ ಮೇಲೆ ಕ್ವಾರಂಟೈನ್‍ನಿಂದ ಹೊರಗೆ ಬರದಂತೆ ನಿಗಾ ವಹಿಸುವ ಸಲುವಾಗಿ ಅವರ ಚಲನ-ವಲನಗಳನ್ನು ಗಮನಿಸಲಾಗುತ್ತದೆ. ಒಂದು ವೇಳೆ ಕ್ವಾರಂಟೈನ್ ಮಾಡಲಾಗಿರುವ ವ್ಯಕ್ತಿಗಳು ತಮ್ಮ ಕ್ವಾರಂಟೈನ್ ಪ್ರದೇಶ ವ್ಯಾಪ್ತಿಯನ್ನು ಮೀರಿದ್ದಲ್ಲಿ ಹಾಗೂ ತಮ್ಮ ಮೊಬೈಲನ್ನು ಸ್ವಿಚಾಫ್ ಮಾಡಿದಲ್ಲಿ ಎಚ್ಚರಿಕೆ ಸಂದೇಶವು ರಾಜ್ಯ ಸಮೀಕ್ಷಾ ಘಟಕದ ಮೂಲಕ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಬರುತ್ತದೆ.
ಗದಗ ಜಿಲ್ಲೆಯಲ್ಲಿ ಕ್ವಾರಂಟೈನ್‍ನನ್ನು ಉಲ್ಲಂಘಿಸಿದ ಹಾಗೂ ಮೊಬೈಲ್ ನಂಬರ್ ಸ್ವಿಚಾಫ್ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ನಲ್ಲಿರುವಂತೆ ನಿಯಂತ್ರಿಸಲಾಗುತ್ತಿದೆ.

ಆದಾಗ್ಯೂ ಸಹ ಕ್ವಾರಂಟೈನ್ ಇದ್ದವರು ಮನೆಯಿಂದ ಬೇರೆ ಕಡೆಗೆ ಚಲನ ವಲನ ಮಾಡುತ್ತಿರುವುದನ್ನು ಗಮನಿಸಿ ಅವರಿಗೆ ನೋಟೀಸನ್ನು ನೀಡಲಾಗಿದೆ. ಇದೇ ರೀತಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಸಾರ್ವಜನಿಕ ಆರೋಗ್ಯ ವಿಪತ್ತಿನ ಈ ಸಂದರ್ಭ ದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.