ಬೆಂಗಳೂರು: ನನಗೆ ಈ ಅಧಿಕಾರ ಸ್ಥಾನ ಮಾನ ಬೇಡ, ನಾನು ಸಾಮಾನ್ಯ ಕಾರ್ಯಕರ್ತನಾಗಿರ ಬಯಸುತ್ತೇನೆ, ಆದರೆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಅವರ ಜತೆ ಸುದೀರ್ಘ ಚರ್ಚೆ ಮಾಡಿ, ನನಗೆ ಈ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಎಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ತಮಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕರೆ ಮಾಡಿ ಶಕ್ತಿ ತುಂಬಿದ್ದಾರೆ. ನಾನು ಕನಕಪುರದ ಬಂಡೆಯಾಗಲು ಇಷ್ಟಪಡುವುದಿಲ್ಲ. ಬದಲಾಗಿ ವಿಧಾನಸೌಧದ ಮೆಟ್ಟಿಲಿಗೆ ಚಪ್ಪಡಿ ಕಲ್ಲಾಗುತ್ತೇನೆ. ಈ ಮೂಲಕ ಪಕ್ಷವನ್ನು ವಿಧಾನಸೌಧದ ಮೂರನೇ ಮಹಡಿಗೆ ತಲುಪಿಸಲು ಇಷ್ಟ ಪಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರು ಆಶೀರ್ವದಿಸಿದ್ದಾರೆ. ಇದು ದೊಡ್ಡ ಜವಾಬ್ದಾರಿ. ಅವರ ನಂಬಿಕೆ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಜನರ ಭಾವನೆ ಅರಿತು ಕೆಲಸ ಮಾಡುತ್ತೇವೆ. ವಿಧಾನಸೌಧ ಚಪ್ಪಡಿ ಕಲ್ಲಿನಂತೆ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಇದೊಂದು ಐತಿಹಾಸಿಕ ದಿನ. ನನ್ನ ಪಾಲಿಗೆ, ರಾಜ್ಯದ ಎಲ್ಲಾ ಕಾಗ್ರೆಸಿಗರು, ಕನ್ನಡ ನಾಡಿನ ಜನರಿಗೆ ಇದೊಂದು ವಿಶೇಷ ದಿನ. ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ವೇಣುಗೋಪಾಲ್ ಅವರ ಜತೆ ಸುದೀರ್ಘ ಚರ್ಚೆ ಮಾಡಿ, ರಾಜ್ಯದ ಎಲ್ಲ ನಾಯಕರ ಬಳಿ ಸಲಹೆ ಪಡೆದು ತಮಗೆ ಈ ಜವಾಬ್ದಾರಿಯನ್ನು ಕೊಟ್ಟು ನಿಮ್ಮ ಮುಂದೆ ನಿಲ್ಲಿಸಿದ್ದಾರೆ. ತಮಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ. ಆದರೆ ಸವಾಲು ಎದುರಿಸಲು ಉತ್ಸಾಹವಿದೆ. ಸೋನಿಯಾ ಗಾಂಧಿ ಅವರು ಯಾವ ಸಂದರ್ಭದಲ್ಲಿ ತಮಗೆ ಈ ಶಕ್ತಿ ಕೊಟ್ಟರು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದರು.
Click this button or press Ctrl+G to toggle between Kannada and English