- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 75 ಹೊಸ ಕೊರೋನ ಸೋಂಕು ಪ್ರಕರಣಗಳು ಪತ್ತೆ

corona virus [1]ಮಂಗಳೂರು, : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 75 ಹೊಸ ಕೊರೋನ  ಸೋಂಕು ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1095ಕ್ಕೆ ಏರಿಕೆಯಾಗಿದೆ. 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶನಿವಾರ ಸೋಂಕು ತಗುಲಿದ 75 ಮಂದಿಯಲ್ಲಿ ಉಸಿರಾಟ ಸಂಬಂಧಿ ತೊಂದರೆಯುಳ್ಳ ‘ಸಾರಿ’ ಮತ್ತು ‘ಐಎಲ್‌ಐ’ ಪ್ರಕರಣಗಳೇ ಅತ್ಯಧಿಕ (35 ಪ್ರಕರಣ) ಆಗಿರುವುದು ಆತಂಕಕ್ಕೆ ಕಾರಣವಾಗಿದೆ.

ಉಳಿದಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 25 ಮಂದಿ ಹೊಸದಾಗಿ ಸೋಂಕಿಗೆ ತುತ್ತಾಗಿದ್ದರೆ, ವಿದೇಶಗಳಿಂದ ಆಗಮಿಸಿದ 11 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಸೋಂಕಿನ ಮೂಲವೇ ಗೊತ್ತಿಲ್ಲದ ಮೂರು ಮಂದಿಗೂ ಪಾಸಿಟಿವ್ ಬಂದಿದೆ. ವಿಶೇಷ ಪ್ರಕರಣವೊಂದರಲ್ಲಿ 26 ವರ್ಷದ ಮಹಿಳೆಗೆ ಹೆರಿಗೆ ಬಳಿಕ ಪಾಸಿಟಿವ್ ಇರುವುದು ಗೊತ್ತಾಗಿದೆ. ಒಬ್ಬರಿಗೆ ಸೋಂಕಿತರ ದ್ವಿತೀಯ ಸಂಪರ್ಕದಿಂದ ಹರಡಿದೆ.

ಹೊಸ ಸೋಂಕಿತರಲ್ಲಿ ಬಹುತೇಕರು 55 ವರ್ಷದೊಳಗಿನವರೇ ಆಗಿದ್ದಾರೆ. 9 ಮಂದಿ 15 ವರ್ಷದೊಳಗಿನ ಮಕ್ಕಳು. ಇವರಲ್ಲಿ ಒಂದು, 3,7 ವರ್ಷದ ಮಕ್ಕಳೂ ಸೇರಿದ್ದಾರೆ. 84 ವರ್ಷ ವಯಸ್ಸಿನ ವೃದ್ಧೆಗೂ ಸೋಂಕು ಹರಡಿದೆ.

13 ಮಂದಿ ಡಿಸ್ಚಾರ್ಜ್: ಆಶಾದಾಯಕ ಬೆಳವಣಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇವರಲ್ಲಿ 70 ವರ್ಷದ ಮಹಿಳೆಯೂ ಸೇರಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಕೊರೋನ ಆರಂಭ ಕಾಲದಲ್ಲಿ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಪ್ರಯಾಣ ಇತಿಹಾಸ ಇರುವವರಲ್ಲೇ ಬಹುತೇಕ ಸೋಂಕು ಕಂಡುಬಂದಿದ್ದರೆ, ಇದೀಗ ಬೇಕಾಬಿಟ್ಟಿ ಹರಡಲು ಆರಂಭವಾಗಿದೆ. ಅದರಲ್ಲೂ ಯಾವುದೇ ಸೋಂಕಿತರ ಸಂಪರ್ಕವಿಲ್ಲದೆ ಸೋಂಕು ಹರಡುತ್ತಿರುವವರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಶೀತಜ್ವರ (ಐಎಲ್‌ಐ), ಉಸಿರಾಟ ತೊಂದರೆ ಕೇಸ್‌ಗಳು ಜಿಲ್ಲೆಯಲ್ಲಿ ಅತ್ಯಧಿಕವಾಗಿವೆ. ಜೊತೆಗೆ ಸೋಂಕಿನ ಮೂಲವೇ ಗೊತ್ತಿಲ್ಲದೆ ಹರಡುತ್ತಿರುವ ಪ್ರಮಾಣವೂ ಹೆಚ್ಚಿದೆ. ಅಲ್ಲದೆ, ಕಳೆದ 13 ದಿನಗಳಲ್ಲಿ 750ಕ್ಕೂ ಅಧಿಕ ಮಂದಿ ಸೋಂಕಿಗೆ ಈಡಾಗಿರುವುದು ಆರೋಗ್ಯ ಅಧಿಕಾರಿಗಳನ್ನೇ ತೀವ್ರ ಆತಂಕಕ್ಕೀಡು ಮಾಡಿದೆ. ಜೂ.21ರಿಂದ ಜು.3ರವರೆಗೆ ಐಎಲ್‌ಐ-132 ಪ್ರಕರಣಗಳು, ಉಸಿರಾಟ ತೊಂದರೆ- 33, ಸೋಂಕಿನ ಮೂಲವೇ ಗೊತ್ತಿಲ್ಲದ 88 ಪ್ರಕರಣಗಳು ವರದಿಯಾಗಿವೆ.