- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋವಿಡ್ ಪಾಸಿಟಿವ್ ಇರುವ ಗರ್ಭೀಣಿಗೆ ಚಿಕಿತ್ಸೆ ನಿರಾಕರಿಸಿ ಮತ್ತೆ ಒಪ್ಪಿಕೊಂಡ ಖಾಸಗಿ ಆಸ್ಪತ್ರೆ

scs-hospital [1]ಮಂಗಳೂರು:  ಖಾಸಗಿ ಆಸ್ಪತ್ರೆಯೊಂದು ಕೋವಿಡ್ ಪಾಸಿಟಿವ್ ಇರುವ ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ.

ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಗೆ ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್‌ ಬಂದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿದ ಎಸ್.ಸಿ.ಎಸ್ ಖಾಸಗಿ ಆಸ್ಪತ್ರೆ ಬಳಿಕ ಶಾಸಕ ಯು.ಟಿ. ಖಾದರ್‌ ಅವರ ಸೂಚನೆಯಂತೆ ಹೆರಿಗೆ ಮಾಡಿಸಲು ಸಮ್ಮತಿಸಿದ ಘಟನೆ ರವಿವಾರ ಮಂಗಳೂರಿನಲ್ಲಿ ನಡೆದಿದೆ.

ಗರ್ಭಿಣಿ ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಕೋವಿಡ್ ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ಬಂದಿತ್ತು. ಆಗ ಆಸ್ಪತ್ರೆಯವರು ಹೆರಿಗೆ ಮಾಡಿಸಲು ನಿರಾಕರಿಸಿದರು. ಗರ್ಭಿಣಿಯ ಕುಟುಂಬದವರು ವಿಷಯವನ್ನು ಖಾದರ್‌ ಅವರ ಗಮನಕ್ಕೆ ತಂದರು. ಶಾಸಕರು ಖಾಸಗಿ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ನಿರಾಕರಿಸಿದ್ದರಿಂದ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಷ್ಟರಲ್ಲಿ ಪ್ರಾರಂಭದಲ್ಲಿ ನಿರಾಕರಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯೇ ಗರ್ಭಿಣಿಯ ಹೆರಿಗೆಗೆ ಸಮ್ಮತಿಸಿದ್ದು, ಸಂಜೆ ವೇಳೆಗೆ ಹೆರಿಗೆ ನಡೆಯಿತು ಎಂದು ಖಾದರ್‌ ತಿಳಿಸಿದ್ದಾರೆ.

ಹೆರಿಗೆಗೆ ಬರುವ ಗರ್ಭಿಣಿಯರಿಗೆ ಕೋವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದ ಸಂದರ್ಭದಲ್ಲಿ ಅಂತಹವ ರನ್ನು ಯಾವ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು ಎನ್ನುವ ಬಗ್ಗೆ ಜಿಲ್ಲಾಡಳಿತವು ಎಲ್ಲ ಖಾಸಗಿ ಆಸ್ಪತ್ರೆಗಳ ಮತ್ತು ಸರಕಾರಿ ಆಸ್ಪತ್ರೆಯ ಆಡಳಿತ ಮಂಡಳಿಯ ಸಭೆ ಕರೆದು ಚರ್ಚಿಸಿ ನಿಯಮವನ್ನು ರೂಪಿಸಬೇಕು. ಈ ಮೂಲಕ ಜನರನ್ನು ಇಂತಹ ಕಷ್ಟ ಸಂಕಷ್ಟಗಳಿಂದ ಪಾರು ಮಾಡಬೇಕು ಎಂದು ಖಾದರ್‌ ಆಗ್ರಹಿಸಿದ್ದಾರೆ.