- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ ಮೂವರು ಬಲಿ

covid-death [1]

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಬುಧವಾರ  ಬೆಳಿಗ್ಗೆ ಮೂವರು ಸಾವನ್ನಪ್ಪಿದ್ದು. ಜಿಲ್ಲೆಯಲ್ಲಿ ಕೋವಿಡ್  ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಉಳ್ಳಾಲ ಅಜಾದ್ ನಗರದ 56 ವರ್ಷದ ಮಹಿಳೆ, ಪುತ್ತೂರು ಮೂಲದ 32 ವರ್ಷದ ಮಹಿಳೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಕೋವಿಡ್ ವೈರಸ್ ಗೆ ಅಸುನೀಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ವಿವಿಧ ಖಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಅಜಾದ್ ನಗರದ 56 ವರ್ಷದ ಪ್ರಥಮ ಸೋಂಕಿತ ಮಹಿಳೆ ಜೂನ್ 19 ರಂದು ಭೇದಿ ಕಾಯಿಲೆಗೆಂದು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 22 ರಂದು ಇವರಿಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.

ಸದ್ಯ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಕೋವಿಡ್ ಮಹಾಮಾರಿಗೆ ಬಲಿಯಾಗಿರುವುದು ಖಚಿತವಾಗಿದ್ದು ಅರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 83 ಮಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಈ ಪೈಕಿ 48 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ, 21 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ಇಬ್ಬರಿಗೆ ಚಿಕ್ಕಮಗಳೂರಿಗೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕು ಬಾಧಿಸಿದೆ. 3 ಮಂದಿಗೆ ರ್‍ಯಾಂಡಮ್‌ ಪರೀಕ್ಷೆ ವೇಳೆ, 3 ಮಂದಿಗೆ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ಓರ್ವರಿಗೆ ಹೆರಿಗೆಗೂ ಮುನ್ನ ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿದೆ. 3 ಮಂದಿಯ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಪ್ರಾಥಮಿಕ ಸಂಪರ್ಕದಿಂದ 11 ತಿಂಗಳ ಗಂಡು ಮಗುವಿಗೂ ಕೋವಿಡ್ ವೈಸ್ ಬಾಧಿಸಿದೆ.