- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನ ಸೋಂಕು ಗುರುವಾರ : ದಕ್ಷಿಣ ಕನ್ನಡ ಜಿಲ್ಲೆ 238, ಉಡುಪಿ ಜಿಲ್ಲೆ 109, ಕಾಸರಗೋಡು ಜಿಲ್ಲೆ 18

Corona [1]

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದಾಖಲೆಯ 238 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,738ಕ್ಕೆ ಏರಿಕೆಯಾಗಿದೆ.

ಗುರುವಾರ ಹೊಸದಾಗಿ ಸೋಂಕು ಪತ್ತೆಯಾದ 238 ಮಂದಿಯಲ್ಲಿ ಕೇವಲ 23 ಮಂದಿಗೆ ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯ 17 ಪ್ರಕರಣಗಳು ಇವೆ. ವಿದೇಶದಿಂದ ಬಂದ 19 ಮಂದಿಗೆ ಮಾತ್ರ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 74 ಮಂದಿ ಗುರುವಾರ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದರೆ, ಹಿರಿಯ ನಾಗರಿಕರೂ ಸೇರಿದ್ದಾರೆ. ಇಲ್ಲಿಯವರೆಗೆ 1,163 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಶೀತ (ಐಎಲ್‌ಐ) ಪ್ರಕರಣಗಳೂ ಹೆಚ್ಚುತ್ತಿವೆ. ಮಳೆ ಮತ್ತು ತಣ್ಣನೆಯ ವಾತಾವರಣವು ಕೊರೋನ ಉಲ್ಬಣಕ್ಕೆ ಇಂಬು ನೀಡುತ್ತಿದೆ. ಇದರಿಂದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಶೀತ ಪ್ರಕರಣಗಳೇ ದಾಖಲೆ ಮಟ್ಟದಲ್ಲಿವೆ. ಗುರುವಾರ ಬರೋಬ್ಬರಿ 106 ಪ್ರಕರಣಗಳು ಶೀತದಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಇಲ್ಲಿಯವರೆಗೆ 50ರ ಆಸುಪಾಸಿನಲ್ಲಿರುತ್ತಿದ್ದ ಐಎಲ್‌ಐ ಕೇಸುಗಳು ಶತಕ ದಾಟಿವೆ.

ಜಿಲ್ಲೆಯಲ್ಲಿ ಗಣನೀಯವಾಗಿ ಏರಿಕೆಯಾದ ಸೋಂಕು ಪ್ರಕರಣದ ಪೈಕಿ ‘ಮೂಲ ಗೊತ್ತಿಲ್ಲದ ಸೋಂಕು’ ಕೇಸುಗಳು ಕೂಡ ಕಡಿಮೆ ಏನಲ್ಲ. ಕಾಂಟ್ಯಾಕ್ಟ್ ಅಂಡರ್ ಟ್ರೇಸಿಂಗ್‌ನಲ್ಲಿ 73 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಇದು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಯನ್ನು ನಿದ್ದೆಗೆಡಿಸುವಂತೆ ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ಗುರುವಾರ  ಒಂದೇ ದಿನ 109 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.  ಕಳೆದ ಕೆಲವು ದಿನಗಳಿಂದ ಸೋಂಕು ನಿಯಂತ್ರಣದಲ್ಲಿತ್ತು. ಇದೀಗ ಮತ್ತೆ ಏರಿಕೆಯಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 1895ಕ್ಕೆ ಏರಿಕೆಯಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರಲ್ಲಿ 11 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ನಾಲ್ಕು ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ .